ತುಮಕೂರು: ನಗರದ ಹೃದಯ ಭಾಗ ಎಂ.ಜಿ.ರಸ್ತೆಗೆ ಹೊಂದಿಕೊಂಡಂತೆ ಬಾಲಭವನದ ಆವರಣದಲ್ಲಿ ಇರುವ ಕೃಷ್ಣರಾಜೇಂದ್ರ ಬಾಲಕಿಯರ ಮಾಧ್ಯಮಿಕ ಶಾಲೆ (ಕೆಆರ್‌ಜಿಎಂಎಸ್) ಪ್ರಸ್ತುತ ಎಂಪ್ರೆಸ್ ಕೆಪಿಎಸ್ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗು ಬಾಲಭವನ ಸಮಿತಿಯವರು ಒತ್ತಡ ಹಾಕುತ್ತಿದ್ದು, ವಿದ್ಯಾರ್ಥಿಗಳು ಅತಂತ್ರಕ್ಕೆ ಸಿಲುಕಿದ್ದಾರೆ.
ಶಾಲಾ ಮಕ್ಕಳನ್ನು ಒಕ್ಕಲೆಬ್ಬಿಸಿ ಅದೇ ಸ್ಥಳದಲ್ಲಿ ಈಜುಕೊಳ ನಿರ್ಮಿಸಲು ಬಾಲಭವನ ಸಮಿತಿ ಮುಂದಾಗಿದ್ದು, ಮಕ್ಕಳ ಮುಂದಿನ ಭವಿಷ್ಯ ಡೋಲಾಯಮಾನ ಸ್ಥಿತಿಗೆ ತಲುಪಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಮ್ಮದಲ್ಲದ ಜಾಗವನ್ನು ಬಾಲಭವನದ ಕಾರ್ಯದರ್ಶಿ ಹೆಸರಿಗೆ ಖಾತೆ ಮಾಡಿಸಿಕೊಂಡು ಮಕ್ಕಳನ್ನು ಅಲ್ಲಿಂದ ಖಾಲಿ ಮಾಡಿಸಿ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಕಟ್ಟಡ ಕಟ್ಟುವುದು ಮುಖ್ಯವೇ? ನೂರಾರು ಮಕ್ಕಳಿಗೆ ಅಕ್ಷರ ಕಲಿಸುವುದು ಮುಖ್ಯವೇ? ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.
ಹಿನ್ನೆಲೆ: ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ 4.20 ಎಕರೆ ಜಾಗವನ್ನು ನೀಡಿ 1946ರಲ್ಲಿ ಶಾಲೆಯನ್ನು ಆರಂಭಿಸಿದ್ದಾರೆ. ಈ ಜಾಗ ಅಂದಿನಿಂದ 2001ರ ವರೆಗೂ ಶಾಲೆಯ ಹೆಸರಿನಲ್ಲೇ ಖಾತೆ ಇರುತ್ತದೆ. 2001–2002ರಲ್ಲಿ ಶಾಲೆ ಹೆಸರನ್ನು ತೆಗೆದು ಬಾಲಭವನದ ಕಾರ್ಯದರ್ಶಿ ಹೆಸರಿಗೆ ಅಂದಿನ ನಗರಸಭೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ. ಯಾವ ದಾಖಲೆ ಆಧಾರದ ಮೇಲೆ ಶಾಲೆಯ ಹೆಸರಿನಲ್ಲಿದ್ದ ಖಾತೆಯನ್ನು ಬಾಲಭವನದ ಹೆಸರಿಗೆ ವರ್ಗಾಯಿಸಲಾಗಿದೆ ಎಂಬುದಕ್ಕೆ ಮಹಾನಗರ ಪಾಲಿಕೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಾಗುವುದಿಲ್ಲ.
ಏತನ್ಮಧ್ಯೆ ಬಾಲಭವನದ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುತ್ತಿದ್ದು, ಈ ಜಾಗವನ್ನು ನಮಗೆ ಕೊಡಬೇಕು ಎಂದು ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಈ ಜಾಗವನ್ನು ಶಾಲೆಗೆ ಉಳಿಸುವಂತೆ 2004ರಲ್ಲಿ ಆದೇಶಿಸಿದೆ. ಆದರೆ ಶಾಲೆ ಹೆಸರಿಗೆ ಖಾತೆ ವರ್ಗಾವಣೆ ಮಾಡಿಲ್ಲ. ಅದರ ಬದಲಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟಡ ನಿರ್ಮಿಸುತ್ತದೆ. ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿಸಿಕೊಂಡು ನಮ್ಮ ಜಾಗದಲ್ಲಿ ಕಟ್ಟಡ ನಿರ್ಮಿಸಿ, ಈಗ ನಮ್ಮನ್ನೇ ಇಲ್ಲಿಂದ ಖಾಲಿ ಮಾಡಿಸಲು ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಶಾಲೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ ಎಂಬುದು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಆರೋಪವಾಗಿದೆ.
2020 ಡಿಸೆಂಬರ್ 23ರಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಮಿಸಿರುವ ಕಟ್ಟಡದ ಜಾಗವನ್ನು ಹೊರತುಪಡಿಸಿ, ಉಳಿದಿರುವ ಜಾಗವನ್ನು ಶಾಲೆ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಈವರೆಗೂ ಇದು ಜಾರಿಗೆ ಬಂದಿಲ್ಲ. ಸಭೆ ನಂತರ ಶಾಸಕರೂ ಸಹ ಗಮನ ಹರಿಸಿಲ್ಲ.
ಆದರೆ ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಾಗ ಖಾಲಿ ಮಾಡುವಂತೆ ಒತ್ತಡ ಹಾಕುತ್ತಲೇ ಇದ್ದಾರೆ. ಅಕ್ಷರ ಕಲಿಯುತ್ತಿರುವ ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲವಾಗಿದೆ.
ಬಡ ಮಕ್ಕಳಿಗೆ ಆಸರೆ
ಈ ಶಾಲೆಯಲ್ಲಿ ಬಡ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದು, ಪ್ರಸ್ತುತ 200ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಈ ಬಾರಿ ಪ್ರವೇಶ ನೀಡಲು ಸಾಧ್ಯವಾಗದೆ ನೂರಾರು ಮಕ್ಕಳನ್ನು ವಾಪಸ್ ಕಳುಹಿಸಲಾಗಿದೆ. ಕೊಠಡಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವ ಎರಡು ಕೊಠಡಿಯಲ್ಲೇ ಎಲ್ಲಾ ಮಕ್ಕಳಿಗೂ ಪಾಠ ಮಾಡಬೇಕಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸಕ್ಕೆ ಬಾರದ ಹಲವು ಕಾಮಗಾರಿ ಮಾಡಲಾಗಿದೆ. ಇದೇ ಯೋಜನೆಯಲ್ಲಿ ಶಾಲಾ ಕೊಠಡಿ ನಿರ್ಮಿಸಿ ಕೊಟ್ಟಿದ್ದರೆ ಇನ್ನೂ ನೂರಾರು ಮಕ್ಕಳ ಶಿಕ್ಷಣಕ್ಕೆ ಆಶ್ರಯ ಕಲ್ಪಿಸಬಹುದಿತ್ತು. ಇಚ್ಛಾಶಕ್ತಿ, ದೂರಾಲೋಚನೆಯ ಕೊರತೆಯಿಂದಾಗಿ ಮರದ ಕೆಳಗೆ ಮಕ್ಕಳು ಪಾಠ ಕೇಳುವಂತಾಗಿದೆ. ಪ್ರವೇಶ ಸಿಗದ ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಖಾತೆ ಮಾಡಿಕೊಡಲಿ
ಶಾಲೆ ಹೆಸರಿನಲ್ಲಿದ್ದ ಖಾತೆಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದು, 4.20 ಎಕರೆ ಪ್ರದೇಶವನ್ನು ಪೂರ್ಣವಾಗಿ ಶಾಲೆ ಹೆಸರಿಗೆ ಖಾತೆ ಮಾಡಿಕೊಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಸಂಪೂರ್ಣವಾಗಿ ಸ್ಥಳ ಬಿಟ್ಟುಕೊಡಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಖಾತೆ ಮಾಡಿಸಬೇಕು ಎಂದು ಎಸ್‌ಡಿಎಂಸಿ ಸದಸ್ಯ ಆರ್.ನವೀನ್ ಕುಮಾರ್ ಒತ್ತಾಯಿಸಿದರು.
ಆಗಿರುವ ಲೋಪವನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟಕ್ಕೂ ಸಿದ್ಧ. ಅದಕ್ಕೆ ಅವಕಾಶ ಮಾಡಿಕೊಡದೆ ಎಲ್ಲವನ್ನೂ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ದಾಖಲೆ ಇಲ್ಲದೆ ಖಾತೆ
ಯಾವುದೇ ದಾಖಲೆ ಇಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಾಲೆಯ ಜಾಗವನ್ನು ಮಹಾನಗರ ಪಾಲಿಕೆಯವರು ಖಾತೆ ಮಾಡಿಕೊಟ್ಟಿದ್ದಾರೆ. ಮತ್ತೆ ಶಾಲೆ ಹೆಸರಿಗೆ ವಾಪಸ್ ನೀಡುವಂತೆ ಪಾಲಿಕೆಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಜಾಗವನ್ನು ಅಳತೆ ಮಾಡಿಸಿ ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಅದರಂತೆ ಅಳತೆ ಮಾಡಿಸಿ ವರದಿ ಸಲ್ಲಿಸಲಾಗುವುದು. ಶಾಲೆ ಹೆಸರಿಗೆ ಖಾತೆ ಮಾಡಿಸಲು ಪ್ರಯತ್ನ ಮುಂದುವರಿಸಲಾಗಿದೆ ಎಂದು ಡಿಡಿಪಿಐ ಸಿ.ನಂಜಯ್ಯ ತಿಳಿಸಿದರು.