ಧಾರವಾಡ: ಸಾಮಾನ್ಯವಾಗಿ ಹುಟ್ಟುಹಬ್ಬ ಆಚರಗಳಿಂದ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಅದ್ಧೂರಿ ಹುಟ್ಟುಹಬ್ಬ ಆಚರಿಸೋದು ತಮ್ಮ ಘನತೆ ಹೆಚ್ಚಿಸುತ್ತದೆ ಎಂದು ಕೊಂಡವರೂ ಇದ್ದಾರೆ. ಅದ್ಯಾರೋ ಇತ್ತಿಚೆಗೊಬ್ಬ ತನ್ನ ಸಾಕು ನಾಯಿಯ ಬರ್ತಡೆ ಮಾಡಿ ಊರಿಗೆ ಊರೇ ಬಾಡೂಟ ಹಾಕಿಸಿದನಂತೆ. ಆದರೆ ಇಲ್ಲಿ ತನಗೆ ತುತ್ತು ನೀಡುವ ಬಸವಣ್ಣನ ಹುಟ್ಟುಹಬ್ಬ ಆಚರಿಸಿ ರೈತ ಸಂಭ್ರಮಿಸಿದ್ದಾನೆ. ಅರೇ ಇದ್ಯಾರಪ್ಪ ಬಸವಣ್ಣ ಅಂತ ಅನ್ಕೊಂಡ್ರಾ? ಉತ್ತರ ಕರ್ನಾಟಕದಲ್ಲಿ ರೈತನ ಜೀವನಾಡಿಯೇ ಎತ್ತುಗಳು. ರೈತನೊಕ್ಕಿದರೆ ಉಕ್ಕುವುದು ಜಗವೆಲ್ಲ, ಒಕ್ಕದಿರೆ ಬಿಕ್ಕುವುದು ಜಗ ಅನ್ನೋ ಮಾತಿನಂತೆ, ಒಕ್ಕುವ ಒಕ್ಕಲಿಗನಿಗೆ ಎತ್ತುಗಳೇ ಜೊತೆಗಾರರು. ಹೀಗಾಗಿ ಅಂತಹ ಕಾಯಕಯೋಗಿ ಎತ್ತುಗಳನ್ನು ಬಸವಣ್ಣ ಎಂದು ನಂಬಿ ರೈತರು ಭಕ್ತ, ಭಾವದಿಂದ ಪೂಜಿಸುತ್ತಾರೆ. ಆದ್ರೆ ಇಲ್ಲೊಬ್ಬ ರೈತ, ತನ್ನ ಎತ್ತಿನ ಬರ್ತಡೇ ಆಚರಣೆ ಮಾಡಿ ಸಂಭ್ರಮಿಸಿದ್ದಾನೆ.
ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ನಾಗರಾಜ ಓಮಗಣ್ಣವರ್ ತಾವು ಪ್ರತಿಯಿಂದ ಸಾಕಿದ ಎತ್ತಿಗೆ ಜನ್ಮ ದಿನ ಆಚರಿಸಿ ಎತ್ತಿಗೂ ಕೃತಜ್ಞರಾಗಿದ್ದಾರೆ.
ಸತತ ಮೂರು ವರ್ಷಗಳಿಂದ ನಾಗರಾಜ್ ಎತ್ತಿನ ಜನ್ಮ ದಿನ ಆಚರಿಸುತ್ತ ಬಂದಿದ್ದಾರೆ.
ಮೊದಲು ಈ ಎತ್ತನ್ನು ಖಸಾಯಿಖಾನೆಗೆ ಮಾರಾಟ ಮಾಡಿದ್ದರಂತೆ. ಆಗ ನಾಗರಾಜ್ ಎತ್ತು ಖರೀದಿಸಿ, ಖಸಾಯಿಖಾನೆಯಿಂದ ಎತ್ತು ತಂದ ದಿನವನ್ನೆ ಜನ್ಮದಿನವೆಂದು ಆಚರಿಸುತ್ತಾ ಬಂದಿದ್ದಾರೆ. ಕೇಕ್ ಕಟ್ ಮಾಡಿ ಸಡಗರದಿಂದ ಎತ್ತಿಗೆ ಜನ್ಮ ದಿನ ಆಚರಣೆ ಮಾಡುತ್ತಾರೆ.
ಜನ್ಮ ದಿನದ ಸಂಭ್ರಮದಲ್ಲಿ ಗ್ರಾಮದ ಹಲವರು ಭಾಗಿಯಾಗಿ ಸಂಭ್ರಮಾಚಣೆ ಮಾಡುವುದು ವಿಶೇಷವಾಗಿದೆ.