ಗದಗ: ಹಣದ ವ್ಯವಹಾರ ಹಿನ್ನೆಲೆ ಅಣ್ಣತಮ್ಮಂದಿರನ್ನೇ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಳು ಕೊಲೆಗೈದ ಘಟನೆ ಶಿರಹಟ್ಟಿ ತಾಲೂಕಿನ ಕೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾಂತೇಶ್ ಮಾಚನಹಳ್ಳಿ (28) ಫಕಿರೇಶ್ ಮಾಚನಹಳ್ಳಿ(17) ಕೊಲೆಗೀಡಾಗಿದ್ದಾರೆ.
ಮಂಜುನಾಥ್ ದೆಸಳ್ಳಿ(38) ಕೊಲೆ ಮಾಡಿದ ಆರೋಪಿ ಎನ್ನಲಾಗಿದ್ದು, ನಸುಕಿನ ಜಾವ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಆದರೆ ಹಲವು ಅಂಶಗಳಿಂದ ಈ ಘಟನೆ ಅನುಕಂಪ ಹಾಗು ಅಚ್ಚರಿಗೆ ಕಾರಣವಾಗಿದೆ. ಹೌದು, ಅಂದುಕೊಂಡಂತೆ ಆಗಿದ್ದರೆ ಇಂದು ಬೆಳಗಾಗೋವಷ್ಟರಲ್ಲಿ ಕೊಲೆಯಾದ ವ್ಯಕ್ತಿ ಮಹಾಂತೇಶ್, ಕನ್ಯೆ ನೋಡಲು ಹೋಗಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೆಯಾಗಿತ್ತು. ತಮ್ಮ ಮಗಳನ್ನು ನೋಡಲು ಬರುತ್ತಾರೆ ಎಂಬ ಸಂಭ್ರಮದಲ್ಲಿದ್ದ ಆ ಮನೆಯಲ್ಲಿಯೂ ಕೊಂಚ ನೋವು ಸಹಜವಲ್ಲವೆ? ಇನ್ನು ಮೃತನ ಮನೆಯಲ್ಲಂತೂ ದುಖಃ ಮುಗಿಲು ಮುಟ್ಟಿದೆ.
ಅಷ್ಟಕ್ಕೂ ಕೊಲೆಗೈದ ವ್ಯಕ್ತಿ ಮಹಾಂತೇಶ್ ಮನೆಯಲ್ಲಿಯೇ ಕುರಿ ಮೇಯಿಸಿಕೊಂಡು ಇದ್ದವನು. ಈಗಾಗಲೇ ಕೆಲಸಕ್ಕೆ ಸೇರುವುದು ಬಿಡೋದು ಹತ್ತು ಹಲವು ಬಾರಿ ನಡೆದೆ ಇತ್ತು. ಆದರೂ ಮಹಾಂತೇಶ್, ಈ ಬಾರಿಯೂ ಕೊಲೆ ಆರೋಪಿ ಮಂಜುನಾಥ್ ನನ್ನು ನಿನ್ನೆ ರಾತ್ರಿ ಮನೆಗೆ ಕರೆದುಕೊಂಡು ಬಂದು ಮತ್ತೆ ಕೆಲಸಕ್ಕೆ ಹೋಗುವಂತೆ ಹೇಳಿದ್ದಾನೆ. ಎಲ್ಲರು ಒಟ್ಟಿಗೆ ರಾತ್ರಿ ಚಿಕನ್ ತಿಂದು ಮಲಗಿದ್ದಾರೆ.
ನಾನು ನಿನ್ನನ್ನು ಕುರಿಕಾಯಲು ಬಿಟ್ಟು, ಕನ್ಯೆ ನೋಡಿ ಬರುತ್ತೇನೆ ಎಂದು ಆರೋಪಿ ಮಂಜುನಾಥನಿಗೆ ಹೇಳಿ ಮಲಗಿದ ಮಹಾಂತೇಶ್, ಬೆಳಿಗ್ಗೆ ಏಳಲೇ ಇಲ್ಲ. ಜೊತೆಗೆ ಇನ್ನೆಂದು ಏಳುವುದೇ ಇಲ್ಲ. ಇನ್ನು ಮಗಳ ನೋಡಲು ಬರಬೇಕಿದ್ದ ಈ ಹುಡುಗ ಎಂದೂ ಆ ಮನೆಗೆ ಹೋಗಲು ಆಗುವುದೇ ಇಲ್ಲ. ಕೊನೆಗೂ ಮಹಾಂತೇಶ ಮರಳಿ ಬಾರದ ಲೋಕಕ್ಕೆ ತೆರಳಿದ. ಜೊತೆಗೆ ತನ್ನ ಸೋದರ ಸಂಬಂಧಿ ಇಗಿನ್ನು 17ವರ್ಷದ ಫಕ್ಕೀರೇಶ ಕೂಡ ಕೊಲೆಯಾಗಿದ್ದಾನೆ. ಬದುಕಿನಲ್ಲಿನ್ನು ಬಾಳಿ ಬೆಳಗಬೇಕಾದ ಫಕ್ಕೀರೇಶನ ಬದುಕು ಅರಳುವ ಮುನ್ನವೇ ಬಾಡಿದಂತಾಗಿದೆ.
ರಾತ್ರಿ ಊಟ ಮಾಡಿ, ಮೂವರು ಮನೆ ಮಾಳಗಿ ಮೇಲೆ ಮಲಗಿಕೊಂಡಿದ್ದಾರೆ. ಆದರೆ ಅದೇನು ಆಯಿತೋ ಬೆಳಗಿನ ಹೊತ್ತಿಗೆ ಇಬ್ಬರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಹೊಡತಕ್ಕೆ ಇಬ್ಬರು ರಕ್ತದ ಮಡುವಿನಲ್ಲಿ ಮಿಂದೆದ್ದರು.
ಕೊಲೆಯ ಬಳಿಕ ಆರೋಪಿ ಊರವರಿಗೆ ಧಮ್ಕಿ ಹಾಕಿ ಪರಾರಿಯಾಗಲು ಯತ್ನಿಸಿದ್ದ ಎಂದು ಹೇಳಲಾಗುತ್ತಿದೆ.
ಬಳಿಕ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್.ಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.