ಬೆಂಗಳೂರು, ಅ.3- ನಟ ನಾಗಭೂಷಣ್ (Nagabhushana) ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿರುವ ಕೆಎಸ್ ಲೇಔಟ್ ಸಂಚಾರ ಪೊಲೀಸರು ಕಾರು ಚಲಾಯಿಸುವಾಗ ನಟ ಮೊಬೈಲ್ ಬಳಕೆ ಏನಾದರೂ ಮಾಡಿದ್ದರಿಂದ ಅಪಘಾತ ಸಂಭವಿಸಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಆರೋಪಿ ನಾಗಭೂಷಣ್ ಗಾಬರಿಯಿಂದ ಅಪಘಾತ ಆಗಿದೆ ಎಂದು ಸ್ವಇಚ್ಛೆಯಿಂದ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನು ನಂಬಲು ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಅಪಘಾತ ರಹಸ್ಯ ಭೇದಿಸಲು ಮುಂದಾಗಿದ್ದಾರೆ. ಅಪಘಾತದ ಕುರಿತು ಪರಿಶೀಲನೆ ನಡೆಸುವಂತೆ ಪೊಲೀಸರು ಆರ್‌ಟಿಓ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಆರ್‌ಟಿಓ ಅಧಿಕಾರಿಗಳಿಗೆ ಐಎಂವಿ ಟೆಸ್ಟ್ ಮಾಡಲು ಸೂಚನೆ ನೀಡಿದ್ದಾರೆ. ಐಎಂವಿ ಟೆಸ್ಟ್ ಮೂಲಕ ಆಕ್ಸಿಡೆಂಟ್ ಸೀಕ್ರೆಟ್ ಹೊರಬರಲಿದೆ. ಕಾರಿನ ಮ್ಯಾನ್ಯುಫ್ಯಾಕ್ಚರ್ ಡಿಫಾಲ್ಟ್‌ನಿಂದ ಅಪಘಾತವಾಗಿದ್ಯಾ? ಬ್ರೇಕ್ ಫೇಲೂರ್‌ನಿಂದ ಸಂಭವಿಸಿದ್ಯಾ? ಗಾಡಿ ಎಷ್ಟು ಡ್ಯಾಮೇಜ್ ಆಗಿದೆ ಎಂದು ಈ ಐಎಂವಿ ಟೆಸ್ಟ್‌ನಿಂದ ಬೆಳಕಿಗೆ ಬರಲಿದೆ.
ಮತ್ತೊಂದು ಕೇಸ್-
ನಟ ನಾಗಭೂಷಣ್ ಮೇಲೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ವಿದ್ಯುತ್ ಕಂಬಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಾಗಬಹುದು. ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಕಾರು ಗುದ್ದಿಸಿದರು.. ಕಾರು ಡಿಕ್ಕಿಯಿಂದ ವಿದ್ಯುತ್ ಕಂಬಕ್ಕೂ ಹಾನಿ ಆಗಿದೆ. ಕಂಬಕ್ಕೆ ಹಾನಿಯಾದ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾನಿ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಇಗೆ ಪೊಲೀಸರು ಸೂಚನೆ ನೀಡಿದ್ದಾರೆ. ದೂರು ಪಡೆದು ಮತ್ತೊಂದು ಎಫ್ಐಆರ್ ದಾಖಲಿಸಲು ಕೆಎಸ್ ಲೇಔಟ್ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.
ನಟ ನಾಗಭೂಷಣ ಕಾರು ಅಪಘಾತ ಪ್ರಕರಣ ಸಂಬಂಧ ತನಿಖೆಯು ನಡೆಯುತ್ತಿದೆ. ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ತನಿಖೆ ನಡೆಸಿ ವರದಿಯನ್ನು ನೀಡುತ್ತಾರೆ. ಲೈಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅವರಿಂದ ದೂರು ಬಂದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.