ಶ್ರೀನಗರ: ಗೋವು ಕಳ್ಳಸಾಗಾಣಿಕೆದಾರರನ್ನು ಹೊಡೆದು ಕೊಲ್ಲುವಂಥ ಘಟನೆಗಳು ಹಾಗೂ ಕಾಶ್ಮೀರದಲ್ಲಿ ದಶಕಗಳ ಹಿಂದೆ ನಡೆದಿದ್ದ ನರಮೇಧದ ಘಟನೆಗಳು ಒಂದೇ ಎಂದು ಹೇಳುವ ಮೂಲಕ ತಮಿಳು ನಟಿ ಸಾಯಿ ಪಲ್ಲವಿ ವಿವಾದಕ್ಕೀಡಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸಾಯಿಪಲ್ಲವಿ ಅವರು ‘ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂಬುದನ್ನು ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ತೋರಿಸಲಾಗಿದೆ. ನೀವು ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಹಾಗಾದರೆ ಈ ಎರಡು ಘಟನೆಗಳ ನಡುವಿನ ವ್ಯತ್ಯಾಸ ಎಲ್ಲಿದೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಾಗ ಈ ರೀತಿ ಹೇಳಿದ್ದು, ಇದರ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಲವರು “ಇದೊಂದು ಮೂರ್ಖತನದ ಹೇಳಿಕೆ’ ಎಂದು ಟೀಕಿಸಿದ್ದರೆ, ಇನ್ನೂ ಕೆಲವರು “ಸತ್ಯವನ್ನು ನೇರವಾಗಿ ಹೇಳಿದ ನಿಮ್ಮ ಧೈರ್ಯ ಮೆಚ್ಚುವಂಥದ್ದು’ ಎಂದು ಹೊಗಳಿದ್ದಾರೆ.
ಸಾಯಿ ಪಲ್ಲವಿ ಪ್ರಸ್ತುತ ತಮ್ಮ ಮುಂಬರುವ ತೆಲುಗು ಚಿತ್ರ ‘ವಿರಾಟ ಪರ್ವಂ’ ಪ್ರಚಾರದಲ್ಲಿದ್ದಾರೆ. ರಾಣಾ ದಗ್ಗುಬಾಟಿ ನಟಿಸಿರುವ ಈ ಚಲನಚಿತ್ರವು 1990ರ ದಶಕದ ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯಲ್ಲಿ ಪ್ರೇಮಕಥೆಯನ್ನು ನಿರೂಪಿಸುತ್ತದೆ. ಸಾಯಿ ಪಲ್ಲವಿ ಅವರು ನಕ್ಸಲ್ ನಾಯಕ ರಾವಣ್ಣ(ರಾಣಾ ದಗ್ಗುಬಾಟಿ) ಯನ್ನು ಪ್ರೀತಿಸುವ ವೆನ್ನೆಲಾ ಪಾತ್ರದಲ್ಲಿ ನಟಿಸಿದ್ದಾರೆ.
ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಜೂನ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.