ಮುಂಬೈನಲ್ಲಿ ಎನ್ ಸಿ ಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ,ಪಂಜಾಬಿ ಗಾಯಕ ಸಿಧು ಮೂಸೆವಾಲಾ ಮತ್ತು ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಪ್ರಕರಣ ಸೇರಿದಂತೆ, ಪ್ರಸ್ತುತ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಲಾರೆನ್ಸ್ ಬಿಷ್ಣೋಯ್ ಬಗ್ಗೆ ನೋಡುವುದಾದರೇ.
ಲಾರೆನ್ಸ್ ಬಿಷ್ಣೋಯ್ ಯಾರಿವನು?
ಲಾರೆನ್ಸ್ ಬಿಷ್ಣೋಯಿದು ಮೂಲತಃ ಕೃಷಿಕ ಕುಟುಂಬ. ಆತ ಹುಟ್ಟಿದ್ದು 1993ರ ಫೆಬ್ರವರಿ 12ರಂದು. ಪಂಜಾಬ್ ನ ಫಿರೋಜ್ ಪುರ್ ಜಿಲ್ಲೆಯಲ್ಲಿ. ಆತನ ನಿಜವಾದ ಹೆಸರು ಸತ್ವಿಂದರ್ ಸಿಂಗ್. ಈತ ಖ್ಯಾತ ಬಿಷ್ಣೋಯಿ ಸಮುದಾಯಕ್ಕೆ ಸೇರಿದ್ದು ಈತನ ತಂದೆ ಹರಿಯಾಣ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಕೆಲಸ ಮಾಡುತ್ತಿದ್ದವರು.
ಫಿರೋಜ್ ಫುರ್ ನಲ್ಲೇ 12ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಆತ, ಆನಂತರ 2010ರಲ್ಲಿ ಚಂಡೀಗಡದಲ್ಲಿ ಪದವಿ ವ್ಯಾಸಂಗಕ್ಕೆ ಡಿಎವಿ ಕಾಲೇಜಿಗೆ ಸೇರಿದ್ದ. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ಅಧ್ಯಯನದ ಸಮಯದಲ್ಲಿ 2011-12ರ ವಿದ್ಯಾರ್ಥಿ ಸಂಘದ (ಎಸ್ಒಪಿಯು) ಅಧ್ಯಕ್ಷನಾದ.
ಸ್ಟೂಡೆಂಟ್ ಪಾಲಿಟಿಕ್ಸ್ ಕರಗತ ಮಾಡಿಕೊಂಡು ಆಗ ಚಂಡೀಗಡದ ಅಂಡರ್ ವರ್ಲ್ಡ್ ನಲ್ಲಿ ಕುಖ್ಯಾತನಾಗಿದ್ದ ಗೋಲ್ಡಿ ಬ್ರಾರ್ ಎನ್ನುವವರ ಜೊತೆಗೆ ಆತ್ಮೀಯತೇ ಬೆಳೆಸಿಕೊಂಡ ಲಾರೆನ್ಸ್ ಬಿಷ್ಣೋಯಿ ಅಲ್ಲಿಂದಲೇ ಆತನ ಕ್ರಿಮಿನಲ್ ಚಟುವಟಿಕೆಗಳು ಪ್ರಾರಂಭವಾಗಿದ್ದು ಎಂದು ಹೇಳಲಾಗುತ್ತದೆ.
ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಆರಂಭದಲ್ಲಿ ಜಗ್ಗು ಭಗವಾನ್ ಪುರಿಯಾ ಎಂಬ ಡಾನ್ ಜೊತೆಗೆ ನಂತರ ಸಂಪತ್ ನೆಹ್ರಾ ಹಾಗೂ ಹರ್ಯಾಣ ಗ್ಯಾಂಗ್ ಸ್ಟರ್ ಕಾಲಾ ಜತೇದಿಯ ಜೊತೆ ಸೇರಿದ್ದ ಲಾರೆನ್ಸ್, ಮನಿ ಕಂಟ್ರೋಲ್ ವರದಿಯ ಪ್ರಕಾರ, ಆತನ ವಿರುದ್ಧ ಮೊದಲ ಕ್ರಿಮಿನಲ್ ಕೇಸ್ ದಾಖಲಾಗಿದ್ದು 2010ರಲ್ಲಿ, ವ್ಯಕ್ತಿಯೊಬ್ಬರ ಕೊಲೆ ಪ್ರಯತ್ನದ ಹಿನ್ನೆಲೆಯಲ್ಲಿ ಆತನ ಮೇಲೆ ಕೇಸ್ ದಾಖಲಾಗಿತ್ತು.
2013ರಲ್ಲಿ ಕಾಲೇಜು ಯೂನಿಯನ್ ಚುನಾವಣೆಯ ಗೆದ್ದ ಅಭ್ಯರ್ಥಿಯನ್ನೇ ಗುಂಡಿಟ್ಟು ಕೊಂದಿದ್ದ. ಲೂಧಿಯಾನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ತನ್ನ ವಿರುದ್ದದ ಅಭ್ಯರ್ಥಿಯನ್ನು ಸಾಯಿಸಿದ್ದು ಈತನ ಮೇಲೆ ಪಂಜಾಬೀ ಗಾಯಕ ಸಿಧು ಮೂಸೆವಾಲ, ಕೆನಡಾದ ಗ್ಯಾಂಗ್ಸ್ಟರ್ ಸುಖದೂಲ್ ಸಿಂಗ್ ಅಲಿಯಾಸ ಸುಖ ದುನೆಕೆ ಮೊದಲಾದವರ ಹತ್ಯೆ ಆರೋಪವಿದೆ. ಗುರ್ಲಾಲ್ ಬ್ರಾರ್ ಮತ್ತು ವಿಕಿ ಮಿದ್ದುಖೇಡ್ ಎಂಬ ಲಾರೆನ್ಸ್ ಗ್ಯಾಂಗ್ ಸದಸ್ಯರ ಹತ್ಯೆ ಹಿಂದೆ ಸುಖದೂಲ್ ಸಿಂಗ್ ಕೈವಾಡ ಇದ್ದರಿಂದ ಆತನನ್ನು ತಾನು ಮುಗಿಸಿದೆ ಎಂದು ಲಾರೆನ್ಸ್ ಹೇಳಿಕೊಂಡಿದ್ದಾರೆ.
ಲಾರೆನ್ಸ್ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಲಿಕ್ಕರ್ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಸುತ್ತಿದ್ದ. ಶ್ರೀಮಂತರನ್ನು ಪ್ರಮುಖ ಉದ್ಯಮಿಗಳನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಈತನನ್ನು 2014ರಲ್ಲಿ ಬಂಧಿಸಲಾಗಿತ್ತು ಆದರೆ, ಆತ ಕಸ್ಟಡಿಯಿಂದಲೇ ತಪ್ಪಿಸಿಕೊಂಡಿದ್ದ. ಪುನಃ 2016ರಲ್ಲಿ ಆತನನ್ನು ಪುನಃ ಬಂಧಿಸಲಾಗಿತ್ತು. ಆಗಿನಿಂದಲೂ ಆತ ಜೈಲಿನಲ್ಲೇ ಇದ್ದುಕೊಂಡು ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದು ಆತನ ಗ್ಯಾಂಗ್ ಹೊರಗಡೆ ಸಕ್ರಿಯವಾಗಿ ಈತನ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದೆ ಅಂದಹಾಗೆ ಬಿಷ್ಣೋಯ್ ಗ್ಯಾಂಗ್ ನಲ್ಲಿ ಪ್ರಸ್ತುತ 7೦೦ ಕ್ಕೂ ಹೆಚ್ಚು ಶೂಟರ್ ಗಳು ಕೆಲಸ ಮಾಡುತ್ತಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ರೌಡಿಸಂ ಮಾತ್ರವಲ್ಲ, ಮದ್ಯ ಸಾಗಾಣಿಕೆ, ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಇತ್ಯಾದಿ ಆದಾಯ ತರುವ ಅಪರಾಧ ಕೃತ್ಯ ಎಸಗುತಿದ್ದು ಒಟ್ಟು 36 ಕ್ರಿಮಿನಲ್ ಕೇಸ್ ಗಳು ಈತನ ವಿರುದ್ಧ ದಾಖಲಾಗಿವೆ ಜೊತೆಗೆ ಈತನಿಗೆ ಖಲಿಸ್ತಾನೀ ಉಗ್ರರರೊಂದಿಗೆ ನಂಟು ಇರುವುದನ್ನು ಎನ್ಐಎ ತನ್ನ ತನಿಖೆಯಲ್ಲಿ ಪತ್ತೆ ಮಾಡಿದೆ.
ಸದ್ಯ ಲಾರೆನ್ಸ್ ಬಿಷ್ಣೋಯ್ನನ್ನು ಭದ್ರತಾ ದೃಷ್ಟಿಯಿಂದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಭರತ್ಪುರ್ ಜೈಲು, ತಿಹಾರ್ ಜೈಲಿನಲ್ಲಿ ಈತನನ್ನು ಇಡಲಾಗಿತ್ತು. ಈಗ ಸಬರಮತಿ ಜೈಲಿನಲ್ಲಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ ಈತ ವಿಒಐಪಿ ಮೂಲಕ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಮಾತನಾಡುತ್ತಾನೆ. ಜೈಲಿನಲ್ಲೇ ಇದ್ದುಕೊಂಡು ಟಿವಿ ನ್ಯೂಸ್ ಚಾನಲ್ಗಳಿಗೆ ಈತ ಸಂದರ್ಶನ ನೀಡಿದ್ದು ಇದೆ.
ಸಲ್ಮಾನ್ ಖಾನ್ ಹತ್ಯೆಗೆ ಕಾರಣವೇನು?
ಕೃಷ್ಣಮೃಗಗಳು ಬಿಷ್ಣೋಯಿ ಸಮುದಾಯದವರು ಪೂಜಿಸುವಂಥ ಪ್ರಾಣಿ. ಹಿಂದೂಗಳು ಗೋವುಗಳನ್ನು ದೇವರು ಎಂದು ಭಾವಿಸಿ ಪೂಜಿಸುವಂತೆ ಉತ್ತರ ಭಾರತದಲ್ಲಿರುವ ಬಿಷ್ಣೋಯಿ ಸಮುದಾಯದವರು ಕೃಷ್ಣಮೃಗಗಳನ್ನು ದೇವರು ಎಂದು ಪೂಜಿಸುತ್ತಾರೆ. ಹಾಗಾಗಿ, ಸಲ್ಮಾನ್ ಖಾನ್ ಹಾಗೂ ಆತನ ಸಹಚರರು ಆ ಕೃಷ್ಣಮೃಗಗಳನ್ನು ಕೊಂದಿದ್ದು ಆ ಸಮುದಾಯದವರನ್ನು ಸಹಜವಾಗಿ ಕೆರಳಿಸಿದೆ. ಲಾರೆನ್ಸ್ ಕೂಡ ಅದೇ ಸಮುದಾಯಕ್ಕೆ ಸೇರಿದವನಾದ್ದರಿಂದ ಸಲ್ಮಾನ್ ಖಾನ್ ವಿರುದ್ಧ ಸೇಡು ತೀರಿಸಿಕೊಳ್ಳಲು ಆತ ಪ್ರತಿಜ್ಞೆ ಮಾಡಿದ್ದಾನೆ.

