ನವೆಂಬರ್ ೨೬ ರಂದು ನ್ಯೂಯಾರ್ಕ್ ಇಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ Air India ವಿಮಾನದಲ್ಲಿ ಮುಂಬೈ ನಿವಾಸಿ, Wells Fargo ಉದ್ಯೋಗಿಯಾಗಿರುವ ಶಂಕರ್ ಮಿಶ್ರಾ ಕುಡಿದ ಅಮಲಿನಲ್ಲಿ ತಮ್ಮ ಸಹ ಪ್ರಯಾಣಿಕ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪವನ್ನು ಹೊತ್ತಿದ್ದರು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಶಂಕರ್ ಮಿಶ್ರಾ ಅವರನ್ನು ಹುಡುಕುತ್ತಿದ್ದ ದೆಹಲಿ ಪೋಲಿಸರಿಗೆ ಅವರ ವಕೀಲರಿಂದ ಬಿಡುಗಡೆಗೊಳಿಸಿದ ಹೇಳಿಕೆಯೊಂದು ದೊರೆತಿದೆ.
“ಈ ವಿಷಯವನ್ನು ಇತ್ಯರ್ಥಗೊಳಿಸಿ, ವೃದ್ಧ ಮಹಿಳೆಗೆ ಪರಿಹಾರವನ್ನು ನೀಡಲಾಗಿದೆ. ಘಟನೆಯಲ್ಲಿ ಮಲಿನಗೊಂಡ ಬಟ್ಟೆ ಮತ್ತು ಬ್ಯಾಗ್ ಗಳನ್ನು ಸ್ವಚ್ಛಗೊಳಿಸಿ ನವೆಂಬರ್ ೩೦ರಂದು ತಲುಪಿಸಲಾಗಿದೆ. ಆಪಾದಿತ ಕೃತ್ಯವನ್ನು ತಾನು ಕ್ಷಮಿಸಿರುವುದಾಗಿ ಹೇಳಿರುವ ಮಹಿಳೆ ಏರ್ ಇಂಡಿಯಾದಿಂದ ಪಾವತಿಸಲಾಗುವ ಪರಿಹಾರಕ್ಕಾಗಿ ಡಿಸೆಂಬರ್ ೨೦ ರಂದು ದೂರು ದಾಖಲಿಸಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಒಪ್ಪಂದದ ಪ್ರಕಾರ ಮಿಶ್ರಾ ಪೇಟಿಎಂ ಮೂಲಕ ಮಹಿಳೆಗೆ ಪರಿಹಾರವನ್ನು ಪಾವತಿಸಿದ್ದರು ಆದರೆ ಒಂದು ತಿಂಗಳ ನಂತರದಲ್ಲಿ ಅಂದರೆ ಡಿಸೆಂಬರ್ ೧೯ ರಂದು ಮಹಿಳೆಯ ಮಗಳು ಪರಿಹಾರದ ಹಣವನ್ನು ಹಿಂದಿರುಗಿಸಿದ್ದಾರೆ. ತನಗೆ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆಯಿದ್ದೂ, ತಾನು ತನಿಖೆಗೆ ಸಹಕರಿಸುತ್ತೇನೆ ಎಂದು ಶಂಕರ್ ಮಿಶ್ರಾ ಬಿಡುಗಡೆಗೊಳಿಸಿದ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹೀನ ಕೃತ್ಯದಲ್ಲಿ ಮಹಿಳೆಯ ಬಟ್ಟೆ ಮತ್ತು ಬ್ಯಾಗ್ ಗಳು ಕೊಳಕಾಗಿದ್ದವು. ಅವುಗಳನ್ನು ಮುಟ್ಟಲೂ ಹಿಂಜರಿದ ಕ್ಯಾಬಿನ್ ಕ್ರಿವ್ ಡಿಸ್ ಇನ್ಫ಼ೆಕ್ಟಂಟ್ ಸಿಂಪಡಿಸಿ, ಪೈಜಾಮಾ ಮತ್ತು ಸಾಕ್ಸ್ ನೀಡಿತ್ತು. ಮಹಿಳೆಯ ಸೀಟ್ ಸಹ ಕೊಳಕಾಗಿದ್ದರೂ ಪರ್ಯಾಯ ಸೀಟ್ ವ್ಯವಸ್ಥೆ ಮಾಡಲಾಗಲಿಲ್ಲ, ಮತ್ತೆ ಆರೋಪಿಯೊಂದಿಗೇ ಮಹಿಳೆ ಪಯಣಿಸಬೇಕಾಯಿತು ಎಂದು ತಿಳಿದುಬಂದಿದೆ.