ಮಂಗಳೂರು,
BJP ಯ ಭದ್ರಕೋಟೆಯಾಗಿರುವ ರಾಜ್ಯದ ಕರಾವಳಿ ಜಿಲ್ಲೆಗಳಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷದ ಒಬ್ಬ ಸದಸ್ಯರೂ ಆಯ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುರಿ ನೀಡಿರುವ ಪಕ್ಷದ ಹಿರಿಯ ನಾಯಕ Amit Shah, ಪ್ರಧಾನಿ ಸಲಹೆಯಂತೆ ಅಲ್ಪಸಂಖ್ಯಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದಾರೆ.
BJP ಯ ಹೆಬ್ಬಾಗಿಲು ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಆರು ಜಿಲ್ಲೆಗಳ ಕೋರ್ ಕಮಿಟಿ ಸಭೆ ನಡೆಸಿದರು. ಪ್ರಬಲ ಹಿಂದುತ್ವ ಪ್ರತಿಪಾದನೆಯ ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅಭದ್ರತೆಯ ವಾತಾವರಣ ದೂರ ಮಾಡಬೇಕು. ದೇಶಭಕ್ತಿಯ ಹೆಸರಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರಾವಳಿ ಜಿಲ್ಲೆಗಳಿಂದ Congress ಮೂಲೋತ್ಪಾಟನೆ ಮಾಡುವಂತೆ ಸೂಚಿಸಿದರೆನ್ನಲಾಗಿದೆ.
ಮುಖಂಡರು ಹಾಗೂ ವಿವಿಧ ಮೋರ್ಚಾಗಳ ಮುಖ್ಯಸ್ಥರ ಜೊತೆ ಸರಣಿ ಸಭೆ ನಡೆಸಿದ ಅವರು, ಕರಾವಳಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ಭಿನ್ನಮತ ಮರೆತು ಒಗ್ಗಟ್ಟಿನಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಂಗಳೂರು (Mangalore), ಉಡುಪಿ(Udupi), ಉತ್ತರಕನ್ನಡ(Uttara Kannada), ಶಿವಮೊಗ್ಗ(Shivamogga), ಚಿಕ್ಕಮಗಳೂರು(Chikkamagaluru) ಹಾಗೂ ಮಡಿಕೇರಿ(Madikeri) ಜಿಲ್ಲೆಗಳ ಸಂಘಟನೆಯ ಮುಖ್ಯಸ್ಥರು, ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಜೊತೆ ಸುದೀರ್ಘ ಸಭೆ ನಡೆಸಿದ ಅಮಿತ್ ಷಾ ಅವರು ಈ ಜಿಲ್ಲೆಗಳಲ್ಲಿ ಯಾವುದೇ ಕಾರಣಕ್ಕೂ ಪಕ್ಷಕ್ಕೆ ಹಿನ್ನಡೆಯಾಗಬಾರದೆಂದು ತಾಕೀತು ಮಾಡಿದರು.
ಇತ್ತೀಚಿನ ಕೆಲವು ಕಹಿ ಘಟನೆಗಳಿಂದಾಗಿ ಕರಾವಳಿಯಲ್ಲಿ ಬಿಜೆಪಿಗೆ ಕಳೆದ ಬಾರಿಯ ಫಲಿತಾಂಶಕ್ಕಿಂತ ತುಸು ಹಿನ್ನಡೆಯಾಗಲಿದೆ ಎಂದು ಆಂತರಿಕ ಸಮೀಕ್ಷೆಗಳು ಹೇಳಿದ್ದವು. ಹೀಗಾಗಿ ಎಚ್ಚೆತ್ತುಕೊಂಡಿರುವ ಪಕ್ಷದ ವರಿಷ್ಠರು ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.