ಬೆಂಗಳೂರು, ಮಾ.30- ಲೋಕಸಭಾ Electionಗೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಯಡಿಯೂರಪ್ಪ ವಿಜಯೇಂದ್ರ ಜಗದೀಶ್ ಶೆಟ್ಟರ್ ಅಶೋಕ್ ಅವರನ್ನು ಒಳಗೊಂಡ ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ಬಿಜೆಪಿಯ ಫೈಯರ್ ಬ್ರಾಂಡ್ ನಾಯಕ ಅನಂತಕುಮಾರ್ ಹೆಗಡೆ ಅವರಿಗೆ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಹಾಗೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆ ಹಾಕಿರುವ ಈಶ್ವರಪ್ಪ ಅವರಿಗೂ ಅವಕಾಶ ನೀಡಿಲ್ಲ.
ಬಿಜೆಪಿ ವರಿಷ್ಠ ನಾಯಕರ ಜೊತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 40 ನಾಯಕರ ಪಟ್ಟಿ ಬಿಡುಗಡೆ ಆಗಿದೆ. ಬಿ.ಎಲ್.ಸಂತೋಷ್ ಅವರನ್ನು ಪಟ್ಟಿಯಿಂದ ಹೊರಗಿಟ್ಟಿದ್ದು, ಯಡಿಯೂರಪ್ಪ ಅಭ್ಯರ್ಥಿಗಳ ಆಯ್ಕೆಯಂತೆ ತಾರಾ ಪ್ರಚಾರಕರ ಪಟ್ಟಿಯಲ್ಲೂ ಮೇಲುಗೈ ಸಾಧಿಸಿದ್ದಾರೆ.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‍ವಾಲ್, ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ವಿ ರಾಜೇಶ್, ಸಂಘಟನೆಯಲ್ಲಿರುವ ಸುನೀಲ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ದೂರ ಇಡಲಾಗಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್?ಗೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಲಾಗಿಲ್ಲ. ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಕೆ.ಎಸ್.ಈಶ್ವರಪ್ಪಗೂ ಸಹ ಕೋಕ್ ನೀಡಲಾಗಿದೆ.
ಯಡಿಯೂರಪ್ಪ ಸೇರಿದಂತೆ ರಾಜ್ಯದ ನಾಲ್ವರು ಮಾಜಿ ಸಿಎಂಗಳು ಹಾಗೂ ಟಿಕೆಟ್ ಕೈತಪ್ಪಿದ ನಳೀನ್‍ಕುಮಾರ್ ಕಟೀಲ್, ಪ್ರತಾಪ್ ಸಿಂಹ, ಎ.ನಾರಾಯಣಸ್ವಾಮಿ, ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರೀತಂಗೌಡ ಸೇರಿದಂತೆ 40 ಮಂದಿ ತಾರಾ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾಗಿರುವ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಬಿ.ಶ್ರೀರಾಮುಲು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.