ಬೆಂಗಳೂರು.
ರಾಜಧಾನಿ ಬೆಂಗಳೂರು ಹೊರವಲಯದ ರಾಮನಗರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.
ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಚರ್ಚೆ ನಡೆದಿರುವ ಬೆನ್ನಲ್ಲೇ ಇಲ್ಲಿ ಇದೀಗ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಸ್ತಿತ್ವಕ್ಕೆ ಬರಲಿದೆ.
ಸದ್ಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಸಂಚಾರದ ಒತ್ತಡ ಹೆಚ್ಚಾಗಿದೆ ಕೆಲವೇ ನಿಮಿಷಗಳಿಗೆ ಒಂದು ವಿಮಾನ ಇಳಿಯುವುದು ಮತ್ತು ಹಾರಾಟ ಮಾಡುತ್ತಿವೆ. ವಿಮಾನ ಸಂಚಾರದ ಈ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ರಾಜ್ಯ ಸರ್ಕಾರ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಇದಷ್ಟೇ ಅಲ್ಲದೆ ಬೆಂಗಳೂರು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಮನ್ನಣೆ ಪಡೆದುಕೊಂಡಿದೆ ಇಲ್ಲಿ ಹಲವಾರು ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ನೆಲೆಯೂರಿವೆ. ಇದರ ಲಾಭವನ್ನು ಪಡೆಯುವ ದೃಷ್ಟಿಯಿಂದ ನೆರೆಯ ತಮಿಳುನಾಡು ಸರ್ಕಾರ ಬೆಂಗಳೂರು ಪಕ್ಕದ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ. ಅದೇ ರೀತಿಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಅನಂತಪುರ ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ ನಡೆಸಿದೆ.
ಬೆಂಗಳೂರಿನಿಂದ ಲಾಭ ಪಡೆಯಲು ನೆರೆಯ ರಾಜ್ಯಗಳು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳ ಕ್ಕಾಗಿ ಹುಡುಕಾಟ ನಡೆಸಿದೆ.
ಇದಕ್ಕಾಗಿ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಬೆಂಗಳೂರು ಹೊರ ವಲಯದ ಮೈಸೂರು ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದರು.
ಯಾವ ಪ್ರದೇಶದಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಎಷ್ಟು ಅನುಕೂಲಕರ ಎಂಬ ಅಂಶವನ್ನು ಪರಿಶೀಲಿಸಿದ ಈ ತಂಡ ಇದೀಗ ರಾಮನಗರ ಸಮೀಪದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದೆ.
ರಾಮನಗರ ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮೈಸೂರಿನ ಮಧ್ಯಭಾಗದಲ್ಲಿದೆ ಪೂರ್ವಕ್ಕೆ ತಮಿಳುನಾಡಿನ ಹೊಸೂರು ಸಹ ಸನಿಹದಲ್ಲಿದೆ. ತುಮಕೂರು ಕೂಡ ಹತ್ತಿರದಲ್ಲೇ ಇದೆ ಈ ಮೂರು ಪ್ರದೇಶಗಳು ಅತ್ಯಂತ ವಿಶಾಲವಾದ ಕೈಗಾರಿಕಾ ಪ್ರದೇಶಗಳನ್ನು ಹೊಂದಿದ್ದು ಹಲವಾರು ಪ್ರತಿಷ್ಠಿತ ಉದ್ಯಮಗಳು ಇಲ್ಲಿ ನೆರೆಯೂರಿವೆ ಹೀಗಾಗಿ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎಂದು ತಿಳಿಸಿದೆ.
ನೂತನ ವಿಮಾನ ನಿಲ್ದಾಣಕ್ಕೆ ಬೇಕಾಗುವ ನೀರು ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಇಲ್ಲಿ ವಿಫುಲವಾಗಿದೆ ಹಾಗಾಗಿ ಇದು ಅತ್ಯಂತ ಪ್ರಶಸ್ತವಾದ ಸ್ಥಳ ಎಂದು ತನ್ನ ವರದಿಯಲ್ಲಿ ತಿಳಿಸಿದೆ.