ಚಾಮರಾಜನಗರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಸಿದ್ದರಾಮಯ್ಯ ಬಳಿ ತೆರಳಿ “ರಕ್ಷಣಾತ್ಮಕ ಆಟ” ಆಡಿದ್ದ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹೊಣಕನಪುರ ಗ್ರಾಮದ ಸಿದ್ದರಾಜು ಎಂಬಾತ ಬಂಧಿತ ಆರೋಪಿ. ಕಳೆದ 3-4 ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದ ಸಿದ್ದರಾಜುವಿನ ಮೇಲೆ ಜಾತಿನಿಂದನೆ, ಗುಂಪು ಹಲ್ಲೆ, ಸರ್ಕಾರದ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ಒಟ್ಟು 8 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ ಎಂದು ತಿಳಿದುಬಂದಿದೆ.
ಈತನ ವಿರುದ್ಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಬಂಧಿಸಲು ತೆರಳಿದ್ದ ಬೇಗೂರು ಪಿಎಸ್ಐ, ಎಎಸ್ಐ ಮೂವರು ಕಾನ್ಸ್‌ಟೇಬಲ್ ಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಿದ್ದರಾಜು ನೇರ ಮೇಕೆದಾಟು ಪಾದಯಾತ್ರೆಗೆ ಹೋಗಿ ಸಿದ್ದರಾಮಯ್ಯ ಬಳಿ ತೆರಳಿ ಎಸ್ಪಿಗೆ ಕರೆ ಮಾಡಿಸಿದ್ದ. ಲೇಡಿ ಪಿಎಸ್ಐಗೆ ಹಲ್ಲೆ ಮಾಡಿರುವುದು ಸೇರಿದಂತೆ ಈತನ ಪೂರ್ವಾಪರ ತಿಳಿದುಕೊಂಡ ಸಿದ್ದರಾಮಯ್ಯ ಹಲ್ಲೆ ಏಕೆ ಮಾಡಿದ್ದೀರಾ ಎಂದು ಬೈದು ಕಳುಹಿಸಿದ್ದರು. ಅದಾದ ನಂತರವು ತಲೆ ಮರೆಸಿಕೊಂಡಿದ್ದ ಈತನನ್ನು ಇಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಬೇಗೂರು ಪೊಲೀಸರು ಒಪ್ಪಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಜಿಲ್ಲೆಗೆ ಭೇಟಿ ನೀಡಿದ್ದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಬಂಧಿಸಿಲ್ಲ ಪ್ರಶ್ನೆ ಕೇಳಿ ಸುದ್ದಿಗಾರರು ಗಮನ ಸೆಳೆದಿದ್ದರು.