ಬೆಂಗಳೂರು – ವನ್ಯ ಪ್ರಾಣಿಗಳಿಂದ ತಯಾರಿಸಿದ ವಸ್ತುಗಳ ಬಳಕೆಗೆ ಇರುವ ನಿಷೇಧದ ಬಗ್ಗೆ ಕೊಡಗಿನ ಜನತೆಗೆ ಆತಂಕ ಬೇಡ ಈ ಬಗ್ಗೆ ಸರ್ಕಾರ ವಿಶೇಷ ನಿಯಮ ರೂಪಿಸಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ (AS Ponnanna) ಹೇಳಿದ್ದಾರೆ.
ವನ್ಯ ಜೀವಿಗಳ ಉತ್ಪನ್ನ ಬಳಕೆ ಕುರಿತಾಗಿ ಅರಣ್ಯ ಇಲಾಖೆಯ ನೂತನ ನಿಯಮಗಳ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ಅವರು ಕೊಡಗಿನ ವಿಶೇಷ ಪರಿಸ್ಥಿತಿಯನ್ನು ವಿವರಿಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅರಣ್ಯ ಇಲಾಖೆಯು ಇಂತಹ ವಸ್ತುಗಳನ್ನು ಹಿಂದುರಿಗಸಲು ದಿನ ನಿಗದಿ ಪಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಗಮನಿಸಿದ್ದು ಇದರಿಂದ ಕೊಡಗಿನ ಜನತೆಗೆ ತೊಂದರೆಯಾಗಲಿದೆ ಎಂಬ ಅಂಶಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಕೊಡಗಿನಲ್ಲಿ ಪಾರಂಪರಿಕವಾಗಿ ಮತ್ತು ಸಾಂಪ್ರಾದಾಯಿಕವಾಗಿ ಐನ್ ಮನೆಗಳಲ್ಲಿ ,ದೇವಸ್ಥಾನಗಳಲ್ಲಿ ಹಾಗೂ ಪೀಚೆ ಕತ್ತಿ ಮುಂತಾದ ಆಭರಣಗಳಲ್ಲಿ ತಲತಲಾಂತರದಿಂದ ವನ್ಯ ಜೀವಿಯ ಉತ್ಪನ್ನಗಳನ್ನು ಬಳಕೆ ಮಾಡಲಾಗಿದ್ದು ಇವುಗಳ ರಕ್ಷಣೆಯ ಜವಾಬ್ದಾರಿ ತಮ್ಮ ಮೇಲಿದ್ದು ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಲ್ಪಿಸುವ ಭರವಸೆ ಸಿಕ್ಕಿದೆ. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಸಿಗದೇ ಇದ್ದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರಿಹಾರ ಒದಗಿಸಲು ತಾವು ಬದ್ದರಿದ್ದು ಯಾರು ಕೂಡ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.