ಪ್ರಸ್ತುತ ಎಲ್ಲ ಕಡೆಯಲ್ಲೂ ಮಳೆರಾಯನ ಅಬ್ಬರ ಹೆಚ್ಚಾಗಿದೆ. ಬಿಟ್ಟು ಬಿಡದೇ ಕಾಡುತ್ತಿರುವ ಮಳೆಯಿಂದ ಜನರು ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸೊಳ್ಳೆಗಳಿಂದ ಕಾಡುವ ರೋಗಗಳ ಸಮಸ್ಯೆ ಹೆಚ್ಚು. ಮನೆ ಸುತ್ತಮುತ್ತ ಸ್ವಚ್ಛವಿಲ್ಲದಿದ್ದರೆ, ಅಥವಾ ನೀರು ನಿಂತರೆ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಇದರಿಂದಾಗಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಹೆಚ್ಚುತ್ತದೆ. ಇತ್ತೀಚೆಗೆ ಡೆಂಗ್ಯೂ ಕಾಯಿಲೆಗೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಅವರಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳು ಹೆಚ್ಚು. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆಗಳು ಹೆಚ್ಚು ಅಪಾಯಕಾರಿ ಮತ್ತು ಮಾರಣಾಂತಿಕವಾಗಿರಲೂಬಹುದು. ಹೀಗಾಗಿ ಡೆಂಗ್ಯೂ ತಡೆಗಟ್ಟಲು ಮಕ್ಕಳ ಬಗ್ಗೆ ವಿಶೇಷ ಕಾಳಜಿಯ ಅಗತ್ಯವಿದೆ.ಮಳೆ ಹಾಗೂ ಚಳಿಗಾಲದಲ್ಲಿ ಹೆಚ್ಚು ಎಚ್ಚರ ವಹಿಸಬೇಕಾಗುತ್ತದೆ. ಮಕ್ಕಳನ್ನು ಈ ಸೋಂಕುಗಳಿಂದ ರಕ್ಷಿಸಬೇಕಾಗಿದೆ. ಡೆಂಗ್ಯೂ ಸೋಂಕಿನ ಹರಡುವಿಕೆಯಿಂದ ಮಕ್ಕಳನ್ನು ರಕ್ಷಿಸಲು ಏನು ಮಾಡಬಹುದು ಎಂಬುದನ್ನು ನೋಡೋಣ.
ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು
ಡೆಂಗ್ಯೂ ರೋಗ ಹರಡುವ ಸೊಳ್ಳೆಗಳು ನಿಂತ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಮನೆ ಸುತ್ತಮುತ್ತ ಸ್ವಚ್ಛತೆ ಮುಖ್ಯ. ಎಲ್ಲಿಯಾದರೂ ಮಳೆನೀರು ಸಂಗ್ರಹವಾದರೆ, ಡೆಂಗ್ಯೂ ಸೊಳ್ಳೆಗಳು ಅದರಲ್ಲಿ ಸಂತಾನೋತ್ಪತ್ತಿ ಮಾಡಬಹುದು. ಹೀಗಾಗಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಕಾಲಕಾಲಕ್ಕೆ ಕೀಟನಾಶಕ ಸಿಂಪಡಿಸಬೇಕು. ಮನೆಯ ಶುಚಿತ್ವದ ಬಗ್ಗೆಯೂ ಕಾಳಜಿ ವಹಿಸಬೇಕು. ಸಂಜೆ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಬೇಕು.
ಮಕ್ಕಳಿಗೆ ಪೂರ್ಣ ತೋಳಿನ ಬಟ್ಟೆ ಧರಿಸಿ
ಡೆಂಗ್ಯೂ ಸೊಳ್ಳೆಗಳು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಹೀಗಾಗಿ ಮಕ್ಕಳು ಎಲ್ಲಾ ಸಮಯದಲ್ಲೂ ಪೂರ್ಣ ತೋಳುಗಳ ಬಟ್ಟೆ ಧರಿಸಬೇಕು. ಮನೆಯ ಹೊರಗೆ ಆಟವಾಡಲು ಹೋಗುವಾಗ ಅಥವಾ ಶಾಲೆಗೆ ಹೋಗುವಾಗಲೂ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸಿದರೆ ಉತ್ತಮ. ಮತ್ತು ಇಂತಹ ಸಮಯದಲ್ಲಿ ಹೊರಗಿನ ಆಟಗಳಿಗೆ ಬ್ರೆಕ್ ಹಾಕಿ ಒಳಾಂಗಣ ಆಟಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟರೆ ಇನ್ನು ಉತ್ತಮ.
ಸೊಳ್ಳೆ ಪರದೆ ಬಳಸಿ
ಮಕ್ಕಳು ಮಲಗಿರುವಾಗ ಸೊಳ್ಳೆಗಳ ದಾಳಿ ಮಾಡುವುದು ಹೆಚ್ಚು. ಹೀಗಾಗಿ ಮಲಗುವಾಗ ಸೊಳ್ಳೆಗಳ ಭಯದಿಂದ ಮಕ್ಕಳನ್ನು ರಕ್ಷಿಸಲು ಸೊಳ್ಳೆ ಪರದೆ ಬಳಸಿ. ತೆರೆದ ಸ್ಥಳಗಳಲ್ಲಿ ಮಕ್ಕಳು ಮಲಗುವುದು ಒಳ್ಳೆಯದಲ್ಲ. ಕೋಣೆಯಲ್ಲಿ ಸೊಳ್ಳೆ ನಿವಾರಕ ಕಾಯಿಲ್‌ಗಳು ಅಥವಾ ಬ್ಯಾಟ್ ಕೂಡಾ ಬಳಸಬಹುದು. ಆರೋಗ್ಯದ ದೃಷ್ಟಿಯಿಂದ ಅವುಗಳು ಅಷ್ಟು ಸುರಕ್ಷಿತವಲ್ಲ. ಹೀಗಾಗಿ ಸೊಳ್ಳೆ ಪರದೆಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಿ
ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಮಕ್ಕಳಿಗೆ ಡೆಂಗ್ಯೂ ಬರುವ ಅಪಾಯ ಹೆಚ್ಚು. ಹೀಗಾಗಿ ಮಕ್ಕಳ ರೋಗನಿರೋಧಕ ಶಕ್ತಿಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಮಕ್ಕಳ ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆಹಾರವಿರಲಿ. ಹಣ್ಣುಗಳು, ಹಸಿರು ತರಕಾರಿಗಳನ್ನು ತಿನ್ನಲು ಮಕ್ಕಳಿಗೆ ನೀಡಿ. ಕಿತ್ತಳೆ, ಕಿವಿ, ನಿಂಬೆ, ಸ್ಟ್ರಾಬೆರಿ, ಟೊಮೆಟೊ ಇತ್ಯಾದಿಗಳಲ್ಲಿ ಸಾಕಷ್ಟು ಖನಿಜಗಳು ಮತ್ತು ವಿಟಮಿನ್ ಸಿ ಇದ್ದು, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನವಿರಲಿ
ಸೊಳ್ಳೆಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಮಕ್ಕಳನ್ನು ರಕ್ಷಿಸಲು ಅವರ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯ. ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಕೈಗಳನ್ನು ತೊಳೆಯುವಂತೆ ಮಕ್ಕಳಿಗೆ ತಿಳಿಸಿ. ಕೈ ಮತ್ತು ಕಾಲುಗಳನ್ನು ಚೆನ್ನಾಗಿ ತೊಳೆಯುವ ಅಭ್ಯಾಸವನ್ನು ಮಾಡಿಕೊಳ್ಳಿ. ವೈಯಕ್ತಿಕ ಸ್ವಚ್ಛತೆಯನ್ನು ಅನುರಿಸುವಂತೆ ಗಮನ ಹರಿಸಿ. ಹಣ್ಣು ತರಕಾರಿಗಳನ್ನು ತೊಳೆದು ಸೇವಿಸುವುದು ಉತ್ತಮ.