ಬೆಂಗಳೂರು,ಜು.15- ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾರಣವಾದ ಬೆಳಗಾವಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಇದೀಗ ರಾಜಭವನ ಅಂಗಳ ತಲುಪಿದೆ.
ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ದು ಬಿಟ್ಟರೆ ಪ್ರಕರಣದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆರೋಪಿಸಿರುವ ಮೃತ ಸಂತೋಷ್ ಪತ್ನಿ ರೇಣುಕಾ ಮನವಿ ಪತ್ರದೊಂದಿಗೆ ರಾಜಭವನದ ಕದ ತಟ್ಟಿದ್ದಾರೆ.
ತಮ್ಮ ಪತಿಯ ಸಾವಿನ ಪ್ರಕರಣ ಕುರಿತಂತೆ ಪೊಲೀಸರಿಂದ ಸರಿಯಾದ ತನಿಖೆ ನಡೆಯುತ್ತಿಲ್ಲ ಎಂದು ಆರೋಪಿ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್‍ಗೆ ಪತ್ರ ಬರೆದಿದ್ದು, ನಿಷ್ಪಕ್ಷ ಹಾಗು ಪಾರದರ್ಶಕ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ. ಕೇವಲ 15 ದಿನದಲ್ಲಿ ಈ ಪ್ರಕರಣದಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಪ್ರಕರಣದ ಪ್ರತಿ ಹಂತದ ತನಿಖೆಯನ್ನೂ ಸೋರಿಕೆ ಮಾಡಿ ಈಶ್ವರಪ್ಪನವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ಈಶ್ವರಪ್ಪರ ಮಾತುಗಳನ್ನು ಗಮನಿಸಿದರೆ ಅವರ ನಿರ್ದೇಶನದಂತೆಯೇ ತನಿಖೆ ನಡೆಯುತ್ತಿದೆ ಎಂದೆನಿಸುತ್ತಿದೆ. ಹೀಗಾಗಿ ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.