ಬೆಂಗಳೂರು, ಸೆ.30- ಆಧುನಿಕ ತಂತ್ರಜ್ಞಾನದ ಲಾಭ ಪಡೆದು ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಕೊಡುವ ಆಮಿಷದೊಂದಿಗೆ ಅಮಾಯಕರನ್ನು ವಂಚಿಸುತ್ತಿದ್ದ ಹೈಟೆಕ್ ವಂಚನೆಯ ಜಾಲವನ್ನು ಸೈಬರ್ ಸೆಲ್ ಪೊಲೀಸರು (Bengaluru Police) ಬೇಧಿಸಿದ್ದಾರೆ.
ವಂಚಕರು ವಂಚನೆಗಾಗಿ 84 ಬ್ಯಾಂಕ್ ಅಕೌಂಟ್ ಗಳನ್ನು ತೆರೆದು ಬರೋಬ್ಬರಿ 854 ಕೋಟಿ ರೂಪಾಯಿ ವಹಿವಾಟು ನಡೆಸಿದ್ದರು. ಈ ಜಾಲಕ್ಕೆ ದೇಶಾದ್ಯಂತ ಸಾವಿರಾರು ಮಂದಿ ಬಿದ್ದಿದ್ದು 5013 ಪ್ರಕರಣಗಳು ದಾಖಲಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ವಿದ್ಯಾವಂತರು, ಸುಶಿಕ್ಷಿತರೇ ಈ ಹೈಟೆಕ್ ವಂಚಕಕರ ಜಾಲದಲ್ಲಿ ಬಲಿಪಶುಗಳಾಗಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು,84 ಬ್ಯಾಂಕ್ ಅಕೌಂಟ್ ಗಲ್ಲಿರುವ ಸುಮಾರು 5 ಕೋಟಿ ರೂಪಾಯಿ ಹಣವನ್ನು ಸಂರಕ್ಷಿಸಿದ್ದಾರೆ.
ಕಳೆದ ಏಪ್ರಿಲ್ 28ರಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯೊಬ್ಬರು ದಿ ವೈನ್ ಗ್ರೂಪ್ ಎಂಬ ಸಾಲದ ಆ್ಯಪ್‍ನಲ್ಲಿ 8.5 ಲಕ್ಷ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವುದಾಗಿ ತಿಳಿಸಿದ್ದರು.
ಈ ಮೊದಲು ದೂರುದಾರರ ಸ್ನೇಹಿತೆ ಈ ಆ್ಯಪ್‍ನಲ್ಲಿ ಹಣ ಹೂಡಿಕೆ ಮಾಡಿ ಲಾಭ ಮಾಡಿಕೊಂಡಿರುವುದನ್ನು ತಿಳಿದುಕೊಂಡು ತಾನೂ ಕೂಡ ಲಾಭ ಮಾಡುವ ಆಸೆಯಿಂದ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಅದರಲ್ಲಿದ್ದ ಆಕರ್ಷಕ ಇನ್‍ಸ್ಟಾಲ್‍ಮೆಂಟ್ ಆಫರ್‍ಗಳಿಗೆ ಮರುಳಾಗಿ ಹಣ ಹೂಡಿಕೆ ಮಾಡಲು ಒಪ್ಪಿದ್ದೆ. ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಮಹಾರಾಷ್ಟ್ರದ ಐಸಿಐಸಿಐ ಬ್ಯಾಂಕ್ ಶಾಖೆಗೆ ಹಾಗೂ ವಿವಿಧ ಯುಪಿಐ ಐಡಿಗಳಿಗೆ ಹಂತ ಹಂತವಾಗಿ 8.50 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.
ಈ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸೈಬರ್ ಸೆಲ್ ಪೊಲೀಸ್ ಅಧಿಕಾರಿಗಳಿಗೆ ಹೈಟೆಕ್ ವಂಚನೆಯ ವಿರಾಟ್ ಸ್ಬರೂಪದ ಅನಾವರಣವಾಗತೊಡಗಿದೆ. ಅಮಾಯಕರನ್ನು ವಂಚಿಸಿದ ಹೈಟೆಕ್ ವಂಚಕರು ಈ ಹಣವನ್ನು
ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಬಳಕೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.
ಖಾತೆದಾರರ ವಿವರಗಳನ್ನು ಬೆನ್ನಟ್ಟಿದಾಗ ಆರೋಪಿಗಳ ಮಾಹಿತಿ ತಿಳಿದುಬಂದಿದೆ. ವಂಚಕರು ವ್ಯಾಟ್ಸಪ್, ಟೆಲಿಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳು ಹಾಗೂ ಗುಂಪುಗಳನ್ನು ರಚಿಸಿ ಅಮಾಯಕರನ್ನು ಸೆಳೆಯುತ್ತಿದ್ದರು.
ಅವರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲು ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿತ್ತು. ತಮಿಳುನಾಡಿನಲ್ಲಿ ತೆರೆಯಲಾಗಿದ್ದ ಖಾತೆಯೊಂದರಿಂದ ಬೆಂಗಳೂರಿನ ಸುಬ್ಬು ಎಂಟರ್‍ಪ್ರೈಸಸ್ ಎಂಬ ಖಾತೆಗೆ ಹಣ ವರ್ಗಾವಣೆಯಾಗಿರುವ ಸುಳಿವು ದೊರೆತಿದೆ.ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಸುಬ್ಬು ಎಂಟರ್‌ಪ್ರೈಸ್ ಮಾಲೀಕರು, ಸ್ನೇಹಿತರೊಬ್ಬರು ತಮಗೆ ಅರಿವಿಲ್ಲದಂತೆ ದಾಖಲಾತಿಗಳನ್ನು ಪಡೆದು ಬ್ಯಾಂಕ್ ಖಾತೆ ತೆರೆದು ಕೃತ್ಯ ನಡೆಸಿದ್ದಾರೆಂಬ ಶಂಕೆ ವ್ಯಕ್ತಪಡಿಸಿದ್ದರು.
ಇದನ್ನು ಆಧರಿಸಿ,ಆರಂಭದಲ್ಲಿ ಐದು ಆರೋಪಿಗಳನ್ನು ಬಂಧಿಸಲಾಯಿತು.ಅವರು ನೀಡಿದ ಮಾಹಿತಿ ಆಧಾರದಲ್ಲಿ ಇಂತಹ ಕೃತ್ಯದಲ್ಲಿ ಭಾಗಿಯಾದ 17 ಮಂದಿ ಆರೋಪಿಗಳು ಬೆಂಗಳೂರಿನಲ್ಲಿರುವುದನ್ನು ಪತ್ತೆ ಹಚ್ಚಿದರು.
ವಿದೇಶದಲ್ಲಿದ್ದುಕೊಂಡು ಬೆಂಗಳೂರಿನಿಂದ ಅಕೌಂಟ್ ಗಳನ್ನು ಮ್ಯಾನೇಜ್ ಮಾಡುತ್ತಿದ್ದ ಜಾಲಕ್ಕೆ ಸಹಕಾರ ಮಾಡುತ್ತಿದ್ದ ಬೆಂಗಳೂರಿನ ಗ್ಯಾಂಗ್ ನ ಮನೋಜ್ ಅಲಿಯಾಸ್ ಜಾಕ್ , ಫಣೀಂದ್ರ , ವಸಂತ್, ಶ್ರೀನಿವಾಸ, ಚಕ್ರಾದರ್ ಅಲಿಯಾಸ್ ಚಕ್ರಿ,ಸೋಮಶೇಖರ್ ಅಲಿಯಾಸ್ ಅಂಕಲ್ ಎಂಬುವರನ್ನು ಬಂಧಿಸಲಾಯಿತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ದಿಗಾರರಿಗೆ ತಿಳಿಸಿದರು.
ವಿದ್ಯಾರಣ್ಯಪುರ, ಯಲಹಂಕ, ಭಾಗದಲ್ಲಿ ವಾಸವಾಗಿದ್ದ ಬಂಧಿತ ಆರೋಪಿಪಿಗಳು ವಿದೇಶದಿಂದ ಬರುವ ಆದೇಶದಂತೆ ಬ್ಯಾಂಕ್ ಅಕೌಂಟ್’ಗಳನ್ನು ಮ್ಯಾನೇಜ್ ಮಾಡುತ್ತಿರುವುದು ಪತ್ತೆಯಾಗಿದ್ದು, ಅರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪರಿಕರಗಳು ಹಾಗೂ ಸುಮಾರು 5 ಕೋಟಿ ರೂಗಳನ್ನು ಫ್ರೀಜ್ ಮಾಡಿಸಲಾಗಿದೆ ಎಂದು ತಿಳಿಸಿದರು.
ಪೋರ್ಟಲ್‌ನಲ್ಲಿ ಸದರಿ ಪ್ರಕರಣಕ್ಕೆ ಸಂಬಧಿಸಿದ ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲಿಸಲಾಗಿ ಆಂಧ್ರಪ್ರದೇಶ 296, ಬಿಹಾರ 200, ದೆಹಲಿ 194, ಗುಜರಾತ್ 642, ಕರ್ನಾಟಕ 487, ಕೇರಳ 188, ಮಹಾರಾಷ್ಟ್ರ 332, ರಾಜಸ್ಥಾನ 270, ತಮಿಳುನಾಡು 472, ತೆಲಂಗಾಣ 719, ಉತ್ತರಪ್ರದೇಶ 505 ಹಾಗೂ ಪಶ್ಚಿಮಬಂಗಾಳದಲ್ಲಿ 118 ಸೇರಿ ವಿವಿಧ ರಾಜ್ಯಗಳ ಸರಿಸುಮಾರು 5013 ದೂರುದಾರರು ಹಣ ಕಳೆದುಕೊಂಡಿರುವ ಬಗ್ಗೆ ವರದಿಯಾಗಿರುವುದು ತಿಳಿದು ಬಂದಿದೆ.
ದೇಶದಾದ್ಯಂತ ಸುಮಾರು 854 ಕೋಟಿ ರೂ ಮೌಲ್ಯದ ಹಣವನ್ನು ವಂಚನೆ ಮಾಡಿದ್ದು, ಈ ಬಗ್ಗೆ ಸುಮಾರು 84 ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ, ಸುಮಾರು 5 ಕೋಟಿ ರೂಪಾಯಿ ಹಣವು ಪ್ರೀಜ್ ಮಾಡಿಸಲಾಗಿರುತ್ತದೆ.
ಕೃತ್ಯಕ್ಕೆ ಬಳಸಿದ್ದ ವಿವಿಧ ಕಂಪನಿಯ 14 ಮೊಬೈಲ್‌ಗಳು, 7 ಲ್ಯಾಪ್‌ಟಾಪ್‌ಗಳು, 1 ಪ್ರಿಂಟರ್,ಸ್ಕೈಪಿಂಗ್ ಮಷಿನ್, ಹಾರ್ಡ್ ಡಿಸ್ಕ್, ಹಲವಾರು ಬ್ಯಾಂಕ್ ಪಾಸ್‌ಬುಕ್‌ಗಳು ಇತರೇ ದಾಖಲಾತಿಗಳನ್ನು ಜಪ್ತಿ ಮಾಡಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ತಿಳಿಸಿದರು.