ಬೆಂಗಳೂರು ಗ್ರಾಮಾಂತರ (Bengaluru Rural) ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ Election ದೇಶದ ಗಮನ ಸೆಳೆದಿದೆ ಇದಕ್ಕೆ ಪ್ರಮುಖ ಕಾರಣ ಇಲ್ಲಿಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸೋದರ ಡಿ.ಕೆ. ಸುರೇಶ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಮುಖಾಮುಖಿಯಾಗಿದ್ದಾರೆ.
ಚುನಾವಣೆಯ ಅಖಾಡದಲ್ಲಿ ಸೇರಿಗೆ ಸವ್ವಾಸೇರು ಎಂಬಂತೆ ಉಭಯ ಪಕ್ಷಗಳ ನಾಯಕರ ನಡುವಿನ ವಾಕ್ ಸಮರ ಪ್ರಚಾರದ ಭರಾಟೆ ಕಾರ್ಯಕರ್ತರ ನಡುವಿನ ಸಂಘರ್ಷ ಝಣಝಣ ಕಾಂಚಾಣದ ಭರಾಟೆ ಸೇರಿದಂತೆ ಎಲ್ಲವೂ ಈ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದ್ದು ದೇಶದ ಜನತೆ ಕುತೂಹಲದಿಂದ ನೋಡುವಂತೆ ಮಾಡಿದೆ.
ರೇಷ್ಮೆ ಹಾಲು ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾದ ಈ ಕ್ಷೇತ್ರ ನಗರ ಮತ್ತು ಗ್ರಾಮೀಣ ಪ್ರದೇಶದ ಸೊಗಡನ್ನು ಒಳಗೊಂಡಿರುವ ದೇಶದಲ್ಲೇ ಅತ್ಯಂತ ದೊಡ್ಡ ಕ್ಷೇತ್ರ ಮಾತ್ರವಲ್ಲದೆ ಜಿದ್ದಾಜಿದ್ದಿನ ಪೈಪೋಟಿಗೂ ಹೆಸರುವಾಸಿಯಾಗಿದೆ.
ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳು.
ಈಗ ಮತ್ತೊಮ್ಮೆ ಜೆಡಿಎಸ್ ನಾಯಕ ಎಚ್.ಡಿ. ದೇವೇಗೌಡ ಮತ್ತು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಕುಟುಂಬದ ನಡುವಣ ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ.
ನಾಲ್ಕನೇ ಸಲ ಕಣಕ್ಕಿಳಿದಿರುವ ಡಿ.ಕೆ. ಸುರೇಶ್ ಇದೇ ಮೊದಲ ಬಾರಿಗೆ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಇಲ್ಲೊಂದು ವಿಶೇಷವೆಂದರೆ ದೇವೇಗೌಡರ ಕುಟುಂಬ ಸದಸ್ಯರಾದ ಡಾ. ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ದೇವೇಗೌಡರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷರಾದರೆ, ಪುತ್ರ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಘಟಕದ ಅಧ್ಯಕ್ಷ.
ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಸೋದರ ಉಪ ಮುಖ್ಯಮಂತ್ರಿ ಶಿವಕುಮಾರ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ.
ಇದರಿಂದಾಗಿ ಕ್ಷೇತ್ರವು ಹೈ ವೋಲ್ಟೇಜ್ ಆಗಿದೆ.
ಇನ್ನೂ ಕಳೆದ ಮೂರು ದಶಕಗಳಿಂದ ಇಲ್ಲಿನ ರಾಜಕಾರಣ ಈ ಎರಡೂ ಕುಟುಂಬಗಳ ನಡುವೆ ನಡೆದಿದೆ.ಒಂದು ಬಾರಿ ಅದು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿ ಬೇರೆಲ್ಲಾ ಚುನಾವಣೆಯಲ್ಲಿ ಈ ಎರಡೂ ಕುಟುಂಬಗಳೇ ಎದುರಾಳಿ.
ಕ್ಷೇತ್ರದಲ್ಲಿ ಒಟ್ಟು 27 ಲಕ್ಷದ 63 ಸಾವಿರದ 910 ಮತದಾರರಿದ್ದಾರೆ.ಇದರಲ್ಲಿ ಒಕ್ಕಲಿಗ ಸಮುದಾಯದ ಮತದಾರರ ಸಂಖ್ಯೆ 7ಲಕ್ಷದ 10 ಲಕ್ಷ ಸಾವಿರವಿದ್ದರೆ, ನಂತರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 5.20 ಲಕ್ಷ ಮತದಾರರಿದ್ದಾರೆ. ಕುರುಬ,ತಿಗಳ,ದೇವಾಂಗ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ 5ಲಕ್ಷ, ಲಿಂಗಾಯತರು – 2.6 ಲಕ್ಷ ಮತ್ತು ಮುಸ್ಲಿಂ ಸಮುದಾಯದ 2.5 ಲಕ್ಷ ಮತದಾರರಿದ್ದಾರೆ.ಇಬ್ಬರೂ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ತಮ್ಮ ಸಮುದಾಯದ ಮತಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.
2019ರಲ್ಲಿ ನಡೆದ ಲೋಕಸಭಾ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿತ್ತು.ಹೀಗಾಗಿ ಅಂದಿನ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಎದುರಿಸಿದ್ದವು.ಆಗ ಅಲ್ಪಸಂಖ್ಯಾತರ ಮತಗಳು ಹಾಗೂ ಜೆಡಿಎಸ್ ಮತಗಳ ಬೆಂಬಲದಿಂದ ಗೆದ್ದಿದ್ದ ಸುರೇಶ್, ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದರು. ನಂತರ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರುತ್ತಿದ್ದಂತೆ, ಎರಡೂ ಕುಟುಂಬಗಳು ಮತ್ತೆ ಎದುರಾಳಿಯಾಗಿವೆ.
ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಡಾ. ಮಂಜುನಾಥ್ ಬಿಜೆಪಿ ಮತಗಳ ಜೊತೆಗೆ ಲಿಂಗಾಯಿತ ಸಮುದಾಯದ ಮತಗಳ ಬ್ಯಾಂಕ್ ಮೇಲೆ ಅವಲಂಬಿತರಾಗಿದ್ದಾರೆ.
ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರಗಳ ಪೈಕಿ ಕನಕಪುರ ಲೋಕಸಭಾ ಕ್ಷೇತ್ರ ಕೂಡ ಒಂದಾಗಿತ್ತು. ಆದ್ರೆ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಕನಕಪುರ ಲೋಕಸಭಾ ಕ್ಷೇತ್ರ ಹೋಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ರಾಮನಗರ, ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ಇವುಗಳ ಜೊತೆಗೆ ತುಮಕೂರಿನ ಕುಣಿಗಲ್ ಕ್ಷೇತ್ರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ಆನೇಕಲ್ ಕ್ಷೇತ್ರಗಳನ್ನು ಒಳಗೊಂಡಿದೆ.
ಪ್ರಸ್ತುತ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಎರಡು ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ನಡೆದಿದೆ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಜೊತೆ ಜೆಡಿಎಸ್ ಮತಗಳು ಸೇರಿ ಹೋಗಿರುವ ಹಿನ್ನೆಲೆಯಲ್ಲಿ ಇಲ್ಲಿ ಬಿಜೆಪಿಯ ಡಾ. ಮಂಜುನಾಥ ಬಂಪರ್ ಕೊಯ್ಲಿನ ನಿರೀಕ್ಷೆಯಲ್ಲಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕು. ಎಂದು ಕಳೆದ ಎರಡು ವಿಧಾನಸಭೆ ಚುನಾವಣೆ ಸಮಯದಲ್ಲಿ ಸಂಸದ ಡಿಕೆ ಸುರೇಶ್ ಹಾಕಿದಪಟ್ಟು ಅಷ್ಟಿಷ್ಟಲ್ಲ. ಆದರೆ ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ಅವರ ಮುಂದೆ ಸುರೇಶ್ ಅವರ ಯಾವ ಆಟವೂ ನಡೆಯಲಿಲ್ಲ. ಆದರೆ ಈ ಚುನಾವಣೆಯಲ್ಲಿ ಸುರೇಶ್ ಸ್ವಲ್ಪ ಹೆಚ್ಚಿನ ಮಟ್ಟಿಗೆ ಹಿಡಿತ ಹೊಂದಿದ್ದಾರೆ ಎಂಬಂತೆ ಕಂಡುಬಂದರೂ ಕೂಡ ಬಿಜೆಪಿಯೇ ಇಲ್ಲಿ ಸ್ವಲ್ಪ ಮುನ್ನಡೆ ಸಾಧಿಸಿದೆ.
ಜೆಡಿಎಸ್ ನಾಯಕ ಕುಮಾರಸ್ವಾಮಿ ಶಾಸಕರಾಗಿರುವ ಚನ್ನಪಟ್ಟಣದಲ್ಲಿ ಶತ್ರುವಿನ ಶತ್ರು ಮಿತ್ರ ಮುಖ್ಯಮಂತ್ರಿ ಆಗಿದೆ ಕುಮಾರಸ್ವಾಮಿ ಮತ್ತು ಬಿಜೆಪಿಯ ಯೋಗೇಶ್ವರ್ ಪರಸ್ಪರ ಒಮ್ಮತದಿಂದ ಮುನ್ನಡೆಯುತ್ತಿದ್ದು ಕಾಂಗ್ರೆಸ್ಸಿಗೆ ದೊಡ್ಡ ಸವಾಲು ತಂದೊಡ್ಡಿದೆ. ಈ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸಾಧಿಸಬೇಕು ಎಂದು ಡಿಕೆ ಶಿವಕುಮಾರ್ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿದರೂ ಅದು ಯಶಸ್ವಿಯಾಗಿಲ್ಲ.
ಈ ಚುನಾವಣೆಯಲ್ಲಂತೂ ಕಾಂಗ್ರೆಸ್ ಪಕ್ಷ ಈ ಕ್ಷೇತ್ರವನ್ನು ಮರೆಯುವುದೇ ವಾಸಿ ಎಂಬಂತೆ ಕಾಣುತ್ತಿದೆ ವಾತಾವರಣ ಇಲ್ಲಿ ಕಳೆದುಕೊಳ್ಳುವ ದೊಡ್ಡ ಹಿಡಿಗಂಟನ್ನು ಎಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕೋ ಎಂಬ ಚಿಂತೆಯಲ್ಲಿ ಬೀಳುವಂತೆ ಮಾಡಿದೆ ಚನ್ನಪಟ್ಟಣ ಕ್ಷೇತ್ರದ ಚಿತ್ರಣ.
ಇವುಗಳನ್ನು ಹೊರತು ಪಡಿಸಿದರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಉಳಿದೆಲ್ಲಾ ವಿಧಾನಸಭೆ ಕ್ಷೇತ್ರಗಳು ಕೈವಶದಲ್ಲಿವೆ. ಹೀಗಾಗಿ ಮೇಲ್ನೋಟಕ್ಕೆ ಇಲ್ಲಿ ಕಾಂಗ್ರೆಸ್ ಹೆಚ್ಚು ಶಕ್ತಿ ಹೊಂದಿದೆ ಎಂಬಂತೆ ಕಂಡುಬರುತ್ತಿದೆ. ಜೊತೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಅತಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಇಲ್ಲಿದ್ದಾರೆ. ಇವರೆಲ್ಲರೂ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸ ಹೊಂದಲಾಗಿದೆ. ಅಷ್ಟೇ ಅಲ್ಲ ಸಂಸದರಾಗಿ ಡಿಕೆ ಸುರೇಶ್ ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ಧಿ ಯೋಜನೆಗಳು ಜನಸಾಮಾನ್ಯರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸುವ ಗುಣ ಕೈ ಹಿಡಿಯಲಿದೆ ಎಂಬ ಖಚಿತ ವಿಶ್ವಾಸದಲ್ಲಿದ್ದಾರೆ.
ಪ್ರಮುಖವಾಗಿ ರಾಮನಗರ, ಮಾಗಡಿ, ಮತ್ತು ಕುಣಿಗಲ್ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಡೆದಿದ್ದಕ್ಕಿಂತ ಅತ್ಯಧಿಕ ಸಂಖ್ಯೆಯ ಮತ ಪಡೆಯುವ ಸಾಧ್ಯತೆ ಇದೆ. ಕುಣಿಗಲ್ ನಲ್ಲಿ ಡಿ. ನಾಗರಾಜಯ್ಯ ಮತ್ತು ಕೃಷ್ಣಕುಮಾರ್ ನಡುವೆ ಏರ್ಪಟ್ಟಿರುವ ಸಂಧಾನ ಬಿಜೆಪಿಗೆ ಆನೆಬಲ ತಂದುಕೊಟ್ಟಿದ್ದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಚಿಂತೆಗೀಡು ಮಾಡಿದೆ.
ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದಷ್ಟೇ ಪ್ರಭಾವಿಯಾಗಿರುವ ಅಲ್ಪಸಂಖ್ಯಾತ ದಲಿತ ಮತ್ತು ಹಿಂದುಳಿದ ವರ್ಗಗಳ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರೆ ಡಿಕೆ ಸುರೇಶ್ ಅವರ ಕೈ ಮೇಲಾಗಬಹುದು
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಂಡಂತಹ ಅನುಕೂಲಕರವಾದ ವಾತಾವರಣ ಕಾಂಗ್ರೆಸ್ ಪಕ್ಷಕ್ಕೆ ಕಂಡು ಬರುತ್ತಿಲ್ಲ ಬಿಜೆಪಿ ಜೆಡಿಎಸ್ ಒಟ್ಟಾಗಿ ನಡೆಯುತ್ತಿರುವುದು ಇಲ್ಲಿ ದೊಡ್ಡ ಸವಾಲು ಎದುರಾಗುವಂತೆ ಮಾಡಿದೆ ಆದರೂ ಡಿಸಿಎಂ ಶಿವಕುಮಾರ್ ಮತ್ತು ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಹೊಂದಿರುವ ಹಿಡಿತ ಕಾಂಗ್ರೆಸ್ ಗೆ ಸ್ವಲ್ಪಮಟ್ಟಿನ ಮುನ್ನಡೆ ತಂದುಕೊಡುವ ಸಾಧ್ಯತೆ ಇದೆ.
ಮಾಗಡಿ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚು ಕಡಿಮೆ ಇದೇ ರೀತಿಯಾದ ವಾತಾವರಣ ಇದೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಏರ್ಪಟ್ಟಿರುವ ಹೊಂದಾಣಿಕೆ ಸುರೇಶ್ ಅವರ ಕೈ ಮೇಲಾಗುವುದಕ್ಕೆ ಕೊಂಚ ಅಡ್ಡಿ ಉಂಟುಮಾಡಿದೆ.
ಆನೇಕಲ್ ಮತ್ತು ಕನಕಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ತಮ್ಮ ಅಭ್ಯರ್ಥಿಗಳು ಪಡೆದ ಮತಗಳಷ್ಟೇ ಪ್ರಮಾಣದ ಮತಗಳನ್ನು ಪಡೆದರೆ ಮತ್ತೊಮ್ಮೆ ಅವರು ಲೋಕಸಭೆಯನ್ನು ಪ್ರವೇಶಿಸಲಿದ್ದಾರೆ.
ಜಯದೇವ ಆಸ್ಪತ್ರೆಯ ಮುಖ್ಯಸ್ಥರಾಗಿ ಡಾ. ಮಂಜುನಾಥ್ ಅವರು ರೋಗಿಗಳಿಗೆ ಸ್ಪಂದಿಸಿರುವ ವೈಖರಿ ಹಾಗೂ ಅವರ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗಲಿದೆ ಇದರ ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಕಾಣಿಸುತ್ತಿತ್ತು ಅದು ಕೂಡ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಜೆಡಿಎಸ್ ನಾಯಕರು.
ಸತತ ಮೂರು ಅವಧಿಗೆ ಸಂಸದರಾಗಿರುವ ಡಿ.ಕೆ. ಸುರೇಶ್ ಅವರಿಗೆ ಸಹಜವಾಗಿಯೇ ಆಡಳಿತ ವಿರೋಧಿ ಅಲೆ ಎದುರಾಗಿದೆ ಇದರ ಜೊತೆಯಲ್ಲಿ ಅವರ ಸೋದರ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರ ಬಗ್ಗೆ ಕ್ಷೇತ್ರದಲ್ಲಿ ಒಂದು ರೀತಿಯಾದ ಅಸಹನೆ ಕೇಳಿಬರುತ್ತದೆ ಕ್ಷೇತ್ರದಲ್ಲಿನ ಶಾಸಕರು ಕೂಡ ಆಡಳಿತ ವಿರೋಧಿ ಅಲೆಯ ಅನುಭವ ಎದುರಿಸುತ್ತಿದ್ದಾರೆ ಈ ಎಲ್ಲವೂ ಕಾಂಗ್ರೆಸ್ ವಿರೋಧಿ ಮತಗಳಾಗಿ ಪರಿವರ್ತನೆಯಾಗಿ ಡಾ. ಮಂಜುನಾಥ್ ಅವರನ್ನು ಗೆಲುವಿನ ದಡ ಸೇರಿಸಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಈ ಎಲ್ಲಾ ವ್ಯಾಖ್ಯಾನಗಳು ಲೆಕ್ಕಾಚಾರಗಳು ಹೊಂದಾಣಿಕೆ ಏನೇ ಇದ್ದರೂ ಕ್ಷೇತ್ರದಲ್ಲಿನ ಮತದಾರ ಮಾತ್ರ ಅತ್ಯಂತ ಪ್ರಜ್ಞಾವಂತ ಮತ್ತು ಆಶ್ಚರ್ಯ ಫಲಿತಾಂಶಕ್ಕೆ ಹೆಸರುವಾಸಿಯಾಗಿದ್ದಾನೆ. ಮಹಿಳೆಯರು ಅತ್ಯಂತ ನಿರ್ಣಾಯಕವಾಗಲಿದ್ದಾರೆ.
ಕ್ಷೇತ್ರದ ಇತಿಹಾಸ ಗಮನಿಸಿದಾಗ ಎಂದಿಗೂ ಕೂಡ ರಾಜಕೀಯ ಪಕ್ಷಗಳ ಲೆಕ್ಕಾಚಾರಗಳು ಸರಿಯಾಗಿಲ್ಲ ಮತದಾರನ ಅಭಿಪ್ರಾಯ ಎಲ್ಲವನ್ನು ತಲೆಕೆಳಗು ಮಾಡಿದೆ ಹೀಗಾಗಿ ಈ ಬಾರಿ ಯಾರು ಗೆಲುವಿನ ದಡ ಸೇರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.