ಬೆಂಗಳೂರು, ಡಿ.11- ಸಿಲಿಕಾನ್ ಸಿಟಿ ಬೆಂಗಳೂರು ಯಾವ ಯಾವುದೋ ಕಾರಣಕ್ಕೆ ಖ್ಯಾತಿ ಪಡೆದುಕೊಳ್ಳುತ್ತಿದೆ.ಇಲ್ಲಿನ ಸಂಚಾರ ದಟ್ಟಣೆ, ಹವಾಗುಣ ಮೊದಲಾದವು ಬೆಂಗಳೂರನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿವೆ.ಇಂತಹ ಬೆಂಗಳೂರು ಇದೀಗ ಆಸಿಡ್ ದಾಳಿಯಲ್ಲೂ (Acid Attacks) ನಂಬರ್ ಒನ್ ಸ್ಥಾನದಲ್ಲಿದೆ.
ಕಳೆದ 2022ರಲ್ಲಿ ನಡೆದ ಮಹಿಳೆಯರ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣಗಳ ಪೈಕಿ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಬೆಂಗಳೂರು ನಗರ ಪೊಲೀಸರು ಆಸಿಡ್ ದಾಳಿಯ ಆರು ಪ್ರಕರಣ ದಾಖಲಿಸಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ತಿಳಿಸಿದೆ.
ಎನ್‌ಸಿಆರ್‌ಬಿ ಡೇಟಾದಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಗಳ ಪೈಕಿ, ಕಳೆದ ವರ್ಷ ಎಂಟು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾಗುವುದರೊಂದಿಗೆ ಬೆಂಗಳೂರು ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಏಳು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾಗುವುದರೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ ಮತ್ತು ಅಹಮದಾಬಾದ್ ನಲ್ಲಿ ಐದು ಪ್ರಕರಣ ವರದಿಯೊಂದಿಗೆ ಮೂರನೇ ಸ್ಥಾನದಲ್ಲಿ ಎಂದು ಅಂಕಿಅಂಶಗಳು ತೋರಿಸಿವೆ.
ಹೈದರಾಬಾದ್ ಮತ್ತು ಅಹಮದಾಬಾದ್ ನಲ್ಲಿ ಇಂತಹ ಎರಡು ಪ್ರಕರಣಗಳಾಗಿವೆ.
ಕಳೆದ ವರ್ಷ 24 ವರ್ಷದ ಎಂಕಾಂ ಪದವೀಧರೆ ಯುವತಿ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಹಲವು ವರ್ಷಗಳಿಂದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ಆರೋಪಿ, ಮದುವೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದಾಗ ಆಕೆಯ ಮೇಲೆ ಆ್ಯಸಿಡ್ ಎರಚಿದ್ದ. ಈ ವ್ಯಕ್ತಿಯನ್ನು ಮೇ ತಿಂಗಳಲ್ಲಿ ತಿರುವಣ್ಣಾಮಲೈ ಆಶ್ರಮದಿಂದ ಬಂಧಿಸಲಾಗಿತ್ತು.
ಅಲ್ಲಿ ಆತ “ಸ್ವಾಮಿ” ವೇಷದಲ್ಲಿ ಅಡಗಿಕೊಂಡಿದ್ದ. ಜೂನ್ 2023 ರಲ್ಲಿ ಸಂತ್ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಯಿತು. ಇದೇ ರೀತಿಯ ಮತ್ತೊಂದು ಪ್ರಕರಣ ಜೂನ್ 10, 2022 ರಂದು ವರದಿಯಾಗಿತ್ತು. ಇದರಲ್ಲಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಮಹಿಳಾ ಸ್ನೇಹಿತೆಯ ಮುಖಕ್ಕೆ ವ್ಯಕ್ತಿಯೊಬ್ಬ ಆಸಿಡ್ ಎರಚಿದ್ದ.