ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವೇರತೊಡಗಿದೆ.ಆಡಳಿತ ರೂಡ ಬಿಜೆಪಿಗೆ ಸೆಡ್ಡು ಹೊಡೆಯಲು ತಮ್ಮದೇ ಶೈಲಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಿದ್ದತೆ ನಡೆಸಿರುವ ಬೆನ್ನಲ್ಲೇ ತಾನು ಒಂದು ಕೈ ನೋಡಲು ನಿರ್ಧರಿಸಿರುವ ಶರದ್ ಪವಾರ್ ನೇತೃತ್ವದ ಎನ್.ಸಿ.ಪಿ.ರಾಜ್ಯದಲ್ಲಿ ಅಸ್ತಿತ್ವ ಹುಡುಕಿಕೊಳ್ಳುವ ಪ್ರಯತ್ನ ಆರಂಭಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯವೈಖರಿ ಬಗ್ಗೆ ಅಸಮಧಾನಗೊಂಡಿರುವ ಹಲವರು ಪರ್ಯಾಯ ಹುಡುಕಾಟದಲ್ಲಿದ್ದಾರೆ.
ಇವರಿಗೆ ಜೆಡಿಎಸ್ ಒಂದು ಆಯ್ಕೆಯಾದರೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇದು ಅಷ್ಟು ಪ್ರಭಾವಿಯಾಗಿಲ್ಲ.ಅಲ್ಲದೆ ಬಹುಕಾಲದಿಂದ ಇದರ ಬಗ್ಗೆ ಲಿಂಗಾಯಿತ ವಿರೋಧಿ ಎಂಬ ಮನೋಭಾವವಿದ್ದು ಇದನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಪ್ರದೇಶದ ಹಲವು ರಾಜಕಾರಣಿಗಳು ಜೆಡಿಎಸ್ ಬಗ್ಗೆ ಅಂತಹ ಒಲವು ಹೊಂದಿಲ್ಲ.
ಇಂತಹ ಅತೃಪ್ತರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು ಅವರೆಲ್ಲಾ ಪರ್ಯಾಯದ ಹುಡುಕಾಟದಲ್ಲಿದ್ದಾರೆ.ಈ ಅವಕಾಶವನ್ನು ಬಳಸಲು ಇದೀಗ ಮಹಾರಾಷ್ಟ್ರದ ರಾಷ್ಟ್ರೀಯ ವಾದಿ ಕಾಂಗ್ರೆಸ್ ಪಕ್ಷ ಎನ್ ಸಿಪಿ ಮುಂದಾಗಿದೆ.
ಉತ್ತರ ಕರ್ನಾಟಕದ ಬೀದರ್, ಬೆಳಗಾವಿ, ವಿಜಯಾಪುರ,ಬಾಗಲಕೋಟೆ ಸೇರಿದಂತೆ ಹಲವೆಡೆ ಮರಾಠಿ ಭಾಷಿಗರ ಪ್ರಾಬಲ್ಯ ಹೆಚ್ಚಿದೆ ಸಹಜವಾಗಿ ಇವರೆಲ್ಲಾ ಎನ್ ಸಿಪಿ ಪರವಾಗಿ ಒಲವು ಹೊಂದಿದ್ದಾರೆ.
ಈ ಬಗ್ಗೆ ಹಲವು ಸಮೀಕ್ಷಾ ವರದಿಗಳನ್ನು ಪಡೆದುಕೊಂಡಿರುವ ಎನ್ ಸಿಪಿ ನಾಯಕ ಶರದ್ ಪವಾರ್ ಕರ್ನಾಟಕದಲ್ಲಿ ತಮ್ಮ ಪಕ್ಷದ ಬೇರುಗಳನ್ನಿಳಿಸಲು ಪ್ರಯತ್ನ ಆರಂಭಿಸಿದ್ದಾರೆ.
ಕಾಂಗ್ರೆಸ್ ಬಿಜೆಪಿಯಲ್ಲಿರುವ ಹಲವು ಅತೃಪ್ತರು ಹಾಗೂ ತಟಸ್ಥವಾಗಿರುವ ಕೆಲವು ಪ್ರಭಾವಿ ಮುಖಂಡರನ್ನು ಸಂಪರ್ಕಿಸಿರುವ ಶರದ್ ಪವಾರ್ ಇವರನ್ನೆಲ್ಲಾ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.
ಇದಕ್ಕಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಶರದ್ ಪವಾರ್ ಎರಡು ದಿನ ಬೆಂಗಳೂರಿನಲ್ಲಿ ಠಿಕಾಣಿ ಹೂಡಲಿದ್ದಾರೆ.ಬಾಣಸವಾಡಿಯಲ್ಲಿ ಪಕ್ಷದ ಕಚೇರಿ ಆರಂಭಿಸುತ್ತಿದ್ದಾರೆ. ಪಂಚತಾರಾ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಅವರು ನಡೆಸಿದ ರಾಜಕೀಯ ಚಟುವಟಿಕೆ ಗಮನ ಸೆಳೆದಿದೆ.