ಬೆಂಗಳೂರು, ನ.29: ತನಿಖೆಯ ಕುಣಿಕೆಗೆ ಸಿಲುಕಿದ್ದ ಉಪ ಮುಖ್ಯಮಂತ್ರಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ನಿಗಧಿತ ಆದಾಯ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ್ದ ಈ ಹಿಂದಿನ ರಾಜ್ಯ ಸರ್ಕಾರದ ಅನುಮತಿ ರದ್ದುಪಡಿಸಿದ ಈಗಿನ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸ್ತು ಅಂದಿದೆ.ಆದರೆ, ಈ ವಿಷಯವಾಗಿ ಸಂಪುಟದ ನಿರ್ಧಾರವನ್ನು ಯಾರು ಬೇಕಾದರೂ ಪ್ರಶ್ನಿಸಬಹುದು ಎಂಬ ಅವಕಾಶ ನೀಡಿದೆ.
ಈ ಪ್ರಕರಣದ ಅನುಗುಣವಾಗಿ ಪ್ರಕರಣದ ಆರೋಪಿಯೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದ್ದ ರಿಟ್ ಅರ್ಜಿ ಮತ್ತು ಈ ಸಂಬಂಧದ ಮೇಲ್ಮನವಿಯನ್ನು ಹಿಂಪಡೆದಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರ ತಮ್ಮ ವಿರುದ್ಧದ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಅನುಮತಿ ನೀಡಿ 2021ರ ಸೆಪ್ಟೆಂಬರ್ 25ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು’ ಎಂದು ಕೋರಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರ್ಕಾರದ ಪರ ಸುಪ್ರೀಂ ಕೋರ್ಟ್ ಹಿರಿಯ ವಕೀಲ ನ್ಯಾಯಮೂರ್ತಿ ಕಪಿಲ್ ಸಿಬಲ್ ಹಾಜರಾಗಿ ಸರ್ಕಾರದ ಅಧಿಸೂಚನೆಯನ್ನು ನ್ಯಾಯಪೀಠಕ್ಕೆ ಮೆಮೊ ಮೂಲಕ ಸಲ್ಲಿಸಿದರು.
ಇದೇ ವೇಳೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಾವು ಸಲ್ಲಿಸಿರುವ ರಿಟ್ ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯುವುದಾಗಿಯೂ ಶಿವಕುಮಾರ್ ಪರ ವಕೀಲರು ಸಲ್ಲಿಸಿದರು ಬಳಿಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ವಾದ-ಪ್ರತಿವಾದ ನಡೆದು, ಅಂತಿಮವಾಗಿ ಪಂಜಾಬ್ ಸರ್ಕಾರದ ಕೇಸ್ ಉಲ್ಲೇಖಿಸಿ, ಮಾನ್ಯ ಮಾಡಿದ ನ್ಯಾಯಪೀಠ ಮೆಮೊ ಪರಿಗಣಿಸಿ ಅರ್ಜಿ ಹಿಂಪಡೆಯುವ ನಿರ್ಧಾರಕ್ಕೆ ಅಸ್ತು ಎಂದು ಆದೇಶಿಸಿತು.
ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ, ಸರ್ಕಾರದ ನಿರ್ಧಾರದ ಮೂಲಕ ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುತ್ತಿದೆ. ಸಿಬಿಐ ತನಿಖೆಯು ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ಪಷ್ಟವಾಗಿದೆ. ಒಮ್ಮೆ ನೀಡಿದ ಒಪ್ಪಿಗೆಯನ್ನು ಸರ್ಕಾರ ಹಿಂಪಡೆಯುವಂತಿಲ್ಲ ಎಂದರು. ಇದೇ ವೇಳೆ ಸಿಬಿಐ ಅನುಮತಿ ಹಿಂಪಡೆದ ಸಚಿವ ಸಂಪುಟದ ನಿರ್ಧಾರವನ್ನು ಯಾರೂ ಬೇಕಾದರೂ ಕೋರ್ಟ್ ನಲ್ಲಿ ಪ್ರಶ್ನಿಸಬಹುದೆಂದು ಮುಕ್ತ ಅವಕಾಶ ನೀಡಿದ ನ್ಯಾಯಪೀಠ ಮೇಲ್ಮನವಿ ವಿಲೇವಾರಿ ಮಾಡಿತು.
ಅರ್ಜಿ ವಜಾ:
ಈ ನಡುವೆ,ತಮ್ಮನ್ನು ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಸೇರ್ಡಡೆ ಮಾಡಿಕೊಳ್ಳಬೇಕು ಎಂದು ಕೋರಿ ಜಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಗಮನಿಸಿದ ನ್ಯಾಯಪೀಠ ನಿಮ್ಮನ್ನು ಈ ಪ್ರಕರಣದಲ್ಲಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿ,ಅವರ ಅರ್ಜಿಯನ್ನು ವಜಾಗೊಳಿಸಿತು.
ತಪ್ಪು ಮಾಡಿಲ್ಲ:
ತೀರ್ಪು ಹೊರಬಿದ್ದ ನಂತರ ಪ್ರತಿಕ್ರಿಯಿಸಿದ ಶಿವಕುಮಾರ್, ನಾನು ಯಾವುದೇ ತಪ್ಪು ಮಾಡಿಲ್ಲ. ಪಕ್ಷದ ಕೆಲಸ ಮಾಡಿದ್ದೇನೆ. ಎಲ್ಲ ಆರೋಪ ಮತ್ತು ಅನಾಚಾರಗಳಿಗೆ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ ಎಂದು ಹೇಳಿದರು
ಬಿಜೆಪಿ ಶಾಸಕ ಯತ್ನಾಳ್ ಸೇರಿದಂತೆ ಹಲವರ ಹೇಳಿಕೆಗಳನ್ನು ಪ್ರಸ್ತಾಪಿಸಿದ ಅವರು, ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲ್ಲಿ, ಎಲ್ಲರ ಆಚಾರ, ವಿಚಾರ ಮತ್ತು ಮನಸ್ಸಿನಲ್ಲಿ ಏನಿದೆ ಎಂಬುದನ್ನು ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ ಎಂದರು.
ನಾನೇನು ತಪ್ಪು ಮಾಡಿಲ್ಲ ಎಂದು ಒತ್ತಿ ಹೇಳಿದ ಅವರು, ಪಕ್ಷದ ಕೆಲಸ ಮಾಡಿದ್ದೇನೆ. ಅದರ ಪರಿಣಾಮ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದೇನೆ. ಮುಂದೆಯೂ ತೊಂದರೆ ಕೊಡುತ್ತೇವೆ ಎನ್ನುವುದಾದರೆ ಆ ಭಗವಂತ ಇದ್ದಾನೆ. ನಾಡಿನ ಜನರಿದ್ದಾರೆ ಎಂದು ಭಾವನಾತ್ಮಕವಾಗಿ ಹೇಳಿದರು.
ನನಗೆ ತೊಂದರೆ ಕೊಡಲು ಹೊರಟ್ಟಿದ್ದಕ್ಕೆ ರಾಜ್ಯದಲ್ಲಿ ಏನಾಗಿದೆ ಎಂದು ಜನ ನೋಡಿದ್ದಾರೆ. ನನ್ನ ಬೆಂಬಲಕ್ಕೆ ನಿಂತ ಮತ್ತು ನನ್ನ ಪರವಾಗಿ ಪ್ರಾರ್ಥಿಸಿದ ಕೋಟ್ಯಂತರ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದರು.