ಬೆಂಗಳೂರು,ಫೆ.26- ಹತ್ತನೆ ತರಗತಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಕಳೆದ ವರ್ಷ ಕೋವಿಡ್ ಕಾರಣದಿಂದಾಗಿ ಸರಿಯಾಗಿ ತರಗತಿಗಳು ನಡೆದಿರಲಿಲ್ಲ ಈ ಹಿನ್ನೆಲೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.
ಇದೇ ರೀತಿಯ ಕೃಪಾಂಕವನ್ನು 2022-23ನೇ ಸಾಲಿನ ಮಾರ್ಚ್- ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೂ ಕೃಪಾಂಕ ನೀಡಲು ತೀರ್ಮಾನಿಸಲಾಗಿದೆ.
ಎರಡು ವರ್ಷಗಳ ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಕಲಿಕೆಯಲ್ಲಿ ಚೇತರಿಕೆಯನ್ನು ಕಂಡಿರದ ಕಾರಣ 2023ರಲ್ಲಿಯೂ ಕೃಪಾಂಕ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ನಿರ್ಣಯಿಸಿದೆ.
ಎಸ್‍ಎಸ್‍ಎಲ್‍ಸಿಯಲ್ಲಿ 6 ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ ಮೂರು ವಿಷಯಗಳಿಗೆ ಕನಿಷ್ಠ 1 ರಿಂದ ಗರಿಷ್ಠ 26 ಅಂಕಗಳವರೆಗೆ ಕೃಪಾಂಕ ದೊರೆಯಲಿದೆ. ಅಂದರೆ, ಒಟ್ಟಾರೆ 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆಯಲು ಬೇಕಾಗುವ ಅಂಕಗಳನ್ನು ನೀಡಲಿದೆ.
100 ಅಂಕಗಳ ಪರೀಕ್ಷೆಯಲ್ಲಿ 20 ಅಂಕಗಳಿಗೆ ಮೌಖಿಕ ಮತ್ತು 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆದಿರಬೇಕು. ಆದರೆ, ಕೆಲವು ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಕೆಲವು ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿರುತ್ತಾರೆ.ಇಂತಹ ವಿದ್ಯಾರ್ಥಿಗಳಿಗೆ ಕೃಪಾಂಕ ನೆರವಾಗಲಿದೆ. ಉತ್ತೀರ್ಣರಾಗಲು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿಸ್ನೇಹಿಯಾಗಿ ನಿಯಮ ರೂಪಿಸಲಾಗಿದೆ.
ಅದೇ ರೀತಿ ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇಕಡ 5 ರಷ್ಟು ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕಗಳನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.
Previous Articleನಕಲಿ ದಾಖಲೆ ಸೃಷ್ಟಿಸಿ ಶಾಸಕರ ಕಾರು ಮಾರಾಟ ಯತ್ನ
Next Article ಪತ್ನಿಯ ಕೊಂದು ಬ್ಯಾರಲ್ ನಲ್ಲಿ ಶವ ಇಟ್ಟ ಪತಿರಾಯ