ಬೆಂಗಳೂರು,ಫೆ.5-
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ BJP ಯಿಂದ ಎಂಟು ಮಂದಿಯನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ದೆಹಲಿಯಲ್ಲಿ ಸಭೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಬಹಿರಂಗ ಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಟು ಜನ ಉಪಮುಖ್ಯಮಂತ್ರಿ ಆಗುವವರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಬಲ್ಲೆ ಎಂದರು. ದೇಶವನ್ನು ಹಾಳು ಮಾಡುವುದು ಬಿಜೆಪಿಯ ಹುನ್ನಾರವಾಗಿದೆ ಎಂದು ಆರೋಪಿಸಿದ ಅವರು ಮತದಾರರು ಬಿಜೆಪಿ ಹಾಗೂ ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.
‘ಸಂಘ ಪರಿವಾರ ಮತ್ತು ಬಿಜೆಪಿಯಲ್ಲಿ ಶೃಂಗೇರಿ ಮಠವನ್ನು ಒಡೆದವರು, ಮಹಾತ್ಮ ಗಾಂಧಿ ಯವರನ್ನು ಕೊಂದವರು, ಪೇಶ್ವೆ ಸಮುದಾಯಕ್ಕೆ ಸೇರಿದವರು ಹೀಗೆ ಎರಡು ಮೂರು ವಿಧದ ಬ್ರಾಹ್ಮಣರಿದ್ದಾರೆ ಎಚ್ಚರ’ ಎಂದು ಹೇಳಿದರು. ‘ವಿವಿಧ ಅಪರಾಧಗಳ ಪ್ರಕರಣದ ಆರೋಪಿ ಸ್ಯಾಂಟ್ರೊ ರವಿ (‘Santro’ Ravi) ಬಂಧನವಾದರೂ ಯಾರ ಹೆಸರೂ ಹೊರಗೆ ಬಂದಿಲ್ಲ. ಅಂತಹ ಸರ್ಕಾರವಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಳ್ಳ-ಸುಳ್ಳರನ್ನು ಒಳಗೆ ಹಾಕುತ್ತೇವೆ’ ಎಂದರು.
ರಾಜ್ಯದಲ್ಲಿ ಪ್ರತಿ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ನಮ್ಮ ಪಕ್ಷದ್ದು. ಉತ್ತಮ ಶಿಕ್ಷಕರನ್ನು ನೇಮಕ ಮಾಡುತ್ತೇವೆ. ಕೆ.ಆರ್.ಪೇಟೆ ತಾಲ್ಲೂಕಿನ ಬಡಕುಟುಂಬವೊಂದು ತಮ್ಮನ್ನು ಭೇಟಿ ಮಾಡಿ 60 ಲಕ್ಷ ರೂ. ಸಾಲ ಮಾಡಿದ್ದು, ನೀವು ಕೈ ಹಿಡಿಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೇ ನಮಗೆ ಉಳಿದಿರುವ ದಾರಿ ಎಂದು ಹೇಳಿದರು.
ರಾಜ್ಯದಲ್ಲಿ ಇಂತಹ ಅನೇಕ ಬಡ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 15ರಿಂದ 20 ಸಾವಿರ ರೂ. ಆದಾಯ ಬರುವ ಕಾರ್ಯಕ್ರಮ ನೀಡಲಾಗುವುದು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಸೂರು ಕಲ್ಪಿಸಲಿದ್ದು, ಐದು ಲಕ್ಷ ಮನೆ ಗಳನ್ನು ಕಟ್ಟಿಕೊಡುವ ಭರವಸೆ ನೀಡಿದರು.