Bengaluru
ರಾಜ್ಯ ವಿಧಾನಸಭಾ Electionಗೆ ಭರ್ಜರಿ ತಾಲೀಮು ಆರಂಭಿಸಿರುವ BJP ನಾಯಕರು ಇದೀಗ ಅಭ್ಯರ್ಥಿಗಳ ಆಯ್ಕೆ ಹಾಗೂ ರಣತಂತ್ರ ರೂಪಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (K Annamalai) ಅವರನ್ನು ಕರ್ನಾಟಕದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯದ ಉಸ್ತುವಾರಿಯಾಗಿದ್ದರು. ರಾಜ್ಯದ ವಿದ್ಯಮಾನಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನೇ ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಇದು ಚುನಾವಣೆ ಸಮಯದಲ್ಲಿ ಅನುಕೂಲವಾಗಲಿದೆ. ಪ್ರಧಾನ್ ಅವರ ಕಾರಣಕ್ಕೆ ಯಡಿಯೂರಪ್ಪ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಈ ನೇಮಕ ಮಾಡಲಾಗಿದೆ.
ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿ ರಾಜ್ಯದಲ್ಲಿ ಕೆಲಸ ಮಾಡಿದ್ದು,ಕರ್ನಾಟಕದ ರಾಜಕೀಯ ಹಾಗೂ ಇಲ್ಲಿನ ಮತದಾರರ ಮನಸ್ಥಿತಿ ಅರಿತಿದ್ದಾರೆ, ಹೀಗಾಗಿ ಅವರಿಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಸರಿ ಸಂಗಮ:
ಚುನಾವಣೆಯಲ್ಲಿ ಕನಿಷ್ಟ ಶೇ. 50 ರಷ್ಟು ಮತಗಳಿಕೆ ಗುರಿಯೊಂದಿಗೆ ಸ್ವತಂತ್ರವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿರುವ ಬಿಜೆಪಿ ನಾಯಕರು, ಮಾರ್ಚ್ ಮಧ್ಯ ಭಾಗದಲ್ಲಿ ದಾವಣಗೆರೆಯಲ್ಲಿ “ಕೇಸರಿ ಮಹಾಸಂಗಮ” ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿದ್ದು, ಫೆಬ್ರವರಿ ಕೊನೆಯ ವಾರದಲ್ಲಿ ರಾಜ್ಯದ 4 ಭಾಗಗಳಿಂದ “ವಿಜಯ ಸಂಕಲ್ಪ” ರಥಯಾತ್ರೆ ನಡೆಸಲಾಗುತ್ತದೆ. ಈ ರಥಯಾತ್ರೆಗಳು ಮಾ. 18ರಿಂದ 20ರ ಅವಧಿಯಲ್ಲಿ ದಾವಣಗೆರೆಗೆ ಬಂದು ಸೇರುವಂತೆ ಮಾರ್ಗ ನಕಾಶೆ ರೂಪಿಸಲಾಗಿದೆ.
ವಿವಿಧ ಕ್ಷೇತ್ರಗಳಿಗೆ ಸಂಬಂಧಪಟ್ಟ ಸಮೀಕ್ಷೆಗಳ ವರದಿಗಳನ್ನಿಟ್ಟುಕೊಂಡು ಚರ್ಚಿಸಿದ ಸಭೆ ಇದರ ಆಧಾರದಲ್ಲಿ ಕ್ಷೇತ್ರಗಳನ್ನು ಎ, ಬಿ, ಸಿ, ಡಿ ಎಂದು ವಿಂಗಡಿಸಿ ಗೆಲ್ಲುವ ಗುರಿ ಹಂಚಲಾಗಿದೆ. “ಎ” ವಿಭಾಗದಲ್ಲಿ 60ರಿಂದ 65 ಸ್ಥಾನ, “ಬಿ” ಯಲ್ಲಿ 25ರಿಂದ 30 ಕ್ಷೇತ್ರಗಳ ಗುರಿ ಹೊಂದಲಾಗಿದ್ದು, ಇವುಗಳ ಮೇಲೆ ಹೆಚ್ಚು ಶ್ರಮ ಹಾಕಬೇಕು. “ಸಿ” ಮತ್ತು “ಡಿ” ವಿಭಾಗಗಳಲ್ಲಿ Congress ಹಾಗೂ JDS ಪ್ರಭಾವ ಹೊಂದಿದ್ದು, ಇಲ್ಲಿ ಹೆಚ್ಚಿನ ಶ್ರಮ ವಹಿಸಬೇಕೆಂದು ಸಭೆಯಲ್ಲಿ ಚರ್ಚೆ ತೀರ್ಮಾನಿಸಲಾಗಿದೆ. ಹಳೆ ಮೈಸೂರು ಭಾಗದಲ್ಲಿ ಯೋಗಿ ಆದಿತ್ಯನಾಥ (Yogi Adityanath) ಪ್ರವಾಸ ಆಯೋಜಿಸಲು ನಿರ್ಧರಿಸಲಾಗಿದೆ.