ಬೆಂಗಳೂರು, ಫೆ. 14:
ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿರುವ BJP ಇದೀಗ ಹಳೆ ಮೈಸೂರು (Old Mysore) ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರ ಪುತ್ರ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರ (BY Vijayendra) ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದೆ. ಹಳೆ ಮೈಸೂರು ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಗುರಿ ಹೊಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ‘ರಾಜ್ಯದಲ್ಲಿ 150 ಶಾಸಕ ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದಕ್ಕಾಗಿ ಹಳೆ ಮೈಸೂರು ಭಾಗಕ್ಕೆ BJP ಒತ್ತು ಕೊಡುತ್ತಿದೆ’ ಎಂದು ಹೇಳಿದರು. ‘ಈ ಪ್ರದೇಶದಲ್ಲಿ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ತುಮಕೂರು ಮಹಾನಗರದಲ್ಲಿ ಯುವ ಸಮಾವೇಶ ನಡೆಸಿದರೆ, ಗುಬ್ಬಿಯಲ್ಲಿ ಮಹಿಳಾ ಸಮಾವೇಶ ನಡೆಸುತ್ತೇವೆ. ತುರುವೇಕೆರೆಯಲ್ಲಿ ರೈತ ಸಮಾವೇಶ ಮೋರ್ಚಾಗಳು ನಡೆಯಲಿವೆ. ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೇಂದ್ರ- ರಾಜ್ಯಗಳ ಸಾಧನೆಯನ್ನು ಮನೆಮನೆಗೆ ತಲುಪಿಸಬೇಕು ಎಂದು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
‘ವಿಧಾನಸಭೆ ಉಪ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ (K.R.Pet, Mandya) ಯಲ್ಲಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಲಭಿಸಿತ್ತು. ಹಳೆ ಮೈಸೂರು ಭಾಗಕ್ಕೆ ಪಕ್ಷ ಒತ್ತು ಕೊಡುತ್ತಿದೆ. ಫೆ. 20ರಂದು ಯುವ ಮೋರ್ಚಾದ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ. ಪ್ರಧಾನಿಯವರ ಅಮೃತ್ ಕಾಲ್ (Amrit Kaal) ಯೋಜನೆಯನ್ನು ಸಾಕಾರಗೊಳಿಸಲು ಹಾಗೂ ದೇಶದ ಕಾರ್ಯಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಯುವಜನತೆಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.