ಬೆಂಗಳೂರು, ಮಾ.2- ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು..? ಇದು ಮಾಜಿ ಸಚಿವರಾದ ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ (ST Somashekar) ಅವರಿಗೆ ಬಿಜೆಪಿ ನೀಡಿರುವ ಷೋಕಾಸ್ ನೋಟೀಸ್.
ರಾಜ್ಯಸಭೆ Election ವೇಳೆ ಪಕ್ಷದ ವಿಪ್ ಉಲ್ಲಂಘಿಸಿಬಅಡ್ಡ ಮತದಾನ ಮಾಡಿದ ಆರೋಪದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವ ಕುರಿತು ಶಾಸಕರಾದ ಎಸ್.ಟಿ.ಸೋಮ ಶೇಖರ್ ಗೆ ನೋಟೀಸ್ ನೀಡಿದೆ.
ಅದೇ ರೀತಿ ಪಕ್ಷದ ವಿಪ್ ಇದ್ದರೂ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಶಿವರಾಮ್ ಹೆಬ್ಬಾರ್ ಅವರಿಗೂ ನೋಟಿಸ್ ಜಾರಿ ಮಾಡಿದೆ.
ಬಿಜೆಪಿ ಮುಖ್ಯ ಸಚೇತಕ ದೊಡ್ಡನಗೌಡರ್ ಪಾಟೀಲ್ ಅವರು ಈ ಇಬ್ಬರು ಶಾಸಕರಿಗೆ ಕಾರಣ ಕೇಳಿ ನೋಟಿಸ್ ಕಳುಹಿಸಿದ್ದು,ಮಾ.5ರೊಳಗೆ ಉತ್ತರ ನೀಡಬೇಕೆಂದು ಸೂಚಿಸಿದ್ದಾರೆ.
ಸಂವಿಧಾನದ 10ನೇ ಶೆಡ್ಯೂಲ್‍ನಡಿ ಬರುವ ಪಕ್ಷಾಂತರ ಮತ್ತು ಅನರ್ಹತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಕಳೆದ ಫೆ.26ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್,ಅವರಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಮತ ಹಾಕುವಂತೆ ವಿಪ್ ನೀಡಲಾಗಿತ್ತು. ಅದನ್ನು ಉಲ್ಲಂಘಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆಂದು ಬಿಜೆಪಿ ಚುನಾವಣೆ ಏಜೆಂಟ್ ಅರವಿಂದ ಬೆಲ್ಲದ್ ವರದಿ ನೀಡಿದ್ದಾರೆ.
ಇನ್ನೂ ಪಕ್ಷದ ವಿಪ್ ಸ್ವೀಕರಿಸದೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ನಾಪತ್ತೆಯಾಗಿದ್ದರು.ಈ ಹಿನ್ನೆಲೆಯಲ್ಲಿ ಶಾಸಕರ ಭವನದ ಅವರ ಕೊಠಡಿಯ ಬಾಗಿಲಿಗೆ ವಿಪ್ ಪ್ರತಿ ಅಂಟಿಸಲಾಗಿತ್ತು. ಯಲ್ಲಾಪುರದ ಅವರ ನಿವಾಸಕ್ಕೆ ವಿಪ್ ರವಾನಿಸಲಾಗಿದೆ.ಆದರೆ, ಅವರು ಅನಾರೋಗ್ಯದ ಕಾರಣ ಮತದಾನಕ್ಕೆ ಬಾರದೆ ಗೈರು ಹಾಜರಾಗಿದ್ದರು. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ನಾನು ಮತದಾನ ಮಾಡಲು ಹೋಗಿರಲಿಲ್ಲ. ಇದರಲ್ಲಿ ಯಾವುದೇ ದುರದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆದರೆ, ಕಾಂಗ್ರೆಸ್ ಶಾಸಕ ಕುಣಿಗಲ್ ರಂಗನಾಥ್ ಅವರ ಕಾರಿನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದ ಹೆಬ್ಬಾಳ ಸಮೀಪದ ಮ್ಯಾನತಾಟೆಕ್ ಪಾರ್ಕ್ ಹತ್ತಿರ ಹಿಲ್ಟನ್ ರೆಸಾರ್ಟ್‍ಗೆ ಭೇಟಿ ನೀಡಿದ್ದರೆಂಬ ಮಾತು ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಇವರಿಗೂ ಷೋಕಾಸ್ ಜಾರಿ ಮಾಡಲಾಗಿದೆ.