ಯಾದಗಿರಿ, ಜ.28- ಅನ್ನಭಾಗ್ಯ (Anna Bhagya) ಯೋಜನೆಯ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಸಹೋದರ ರಾಜು ರಾಠೋಡ್ ನನ್ನು ಶಹಾಪುರ ಪೊಲೀಸರು ಬಂಧಿಸಿದ್ದಾರೆ. ಶಹಾಪುರದಲ್ಲಿ ಇತ್ತೀಚೆಗೆ ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು,
ಪೊಲೀಸರು ಈ ಬಗ್ಗೆ ವಿಶೇಷ ನಿಗಾ ವಹಿಸಿದ್ದರು. ರೈಸ್ ಮಿಲ್ ಗಳ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸಿದ್ದರು
ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ಗೆ ಸೇರಿದ ಶ್ರೀ ಲಕ್ಷ್ಮೀ ತಿಮ್ಮಪ್ಪ ರೈಸ್ ಮಿಲ್ ಮೇಲೆ ನಿನ್ನೆ ಪೊಲೀಸರು ದಾಳಿ ಮಾಡಿದ್ದರು.
ದಾಳಿಯ ವೇಳೆ ಅನ್ನಭಾಗ್ಯದ 550 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದ್ದು,ಅದನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಯನ್ನು ಕೈಗೊಂಡಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದಲ್ಲೇ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಅಕ್ರಮ ಅಕ್ಕಿ ಸಾಗಾಟ ಪ್ರಕರಣಗಳು ದಾಖಲಾಗಿದ್ದವು. ದಂಧೆಕೋರರು ಯಾವುದೇ ಭಯವಿಲ್ಲದೇ ರಾಜಾರೋಷವಾಗಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಿಸುತ್ತಿದ್ದರು. ಅಕ್ಕಿ ಸಿಗದೇ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿಯನ್ನ ಜಪ್ತಿ ಮಾಡಿದ್ದರು. ಈ ಅಕ್ರಮ ಅಕ್ಕಿ ದಂಧೆ ತಡೆಗೆ ಆಹಾರ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿತ್ತು.
ಇನ್ನು ನಾಲ್ಕು ಪ್ರಕರಣದಲ್ಲಿ 100 ಕ್ಕೂ ಕ್ವಿಂಟಲ್ ಅಕ್ಕಿಯನ್ನ ವಶಕ್ಕೆ ಪಡೆಯಲಾಗಿತ್ತು. ವಿಜಯಕುಮಾರ ಮಟ್ಟಿ, ವೀರಣ್ಣ ಬಡಿಗೇರಿ, ಶಿವಾನಂದ ಬಡಿಗೇರಿ, ಖಾಜಾಹುಸೇನ್ ದಂಧೆಕೋರರ ವಿರುದ್ಧ ದೂರು ದಾಖಲಾಗಿತ್ತು. ಇತ್ತ ಆಹಾರ ಇಲಾಖೆಯೂ ಅಕ್ರಮ ಅಕ್ಕಿ ದಂಧೆಕೋರರ ಪಟ್ಟಿ ರೆಡಿ ಮಾಡಿತ್ತು. ಗೂಂಡಾ ಕಾಯ್ದೆ ಅಥವಾ ಗಡಿಪಾರು ಮಾಡುವಂತೆ ಡಿಸಿಗೆ ಶಿಫಾರಸು ಮಾಡಿದೆ.