ಬೆಂಗಳೂರು.
ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಪಣ ತೊಟ್ಟಿರುವ BJP ಇದೀಗ ರಥಯಾತ್ರೆ ಮೂಲಕ ಮತದಾರರ ಮನೆ ಬಾಗಿಲು ಬಡಿಯಲು ಸಜ್ಜಾಗಿದೆ. ಬಿಜೆಪಿಯ ಚುನಾವಣಾ ರಥಯಾತ್ರೆ (BJP Ratha Yatra) ಮಾರ್ಚ್ ಒಂದರಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಕಟಿಸಿದ್ದಾರೆ. ಖಾಸಗಿ ಹೊಟೇಲ್‌ನಲ್ಲಿ ನಡೆದ 224 ಕ್ಷೇತ್ರಗಳ ಉಸ್ತುವಾರಿಗಳ ಸಭೆಯಲ್ಲಿ ಈ ನಿರ್ಧಾರ ತಿಳಿಸಿದ್ದಾರೆ.
ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalinkumar Kateel), ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa), ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಎಲ್ಲಾ ರಾಜ್ಯ ಉಸ್ತುವಾರಿಗಳಿಗೆ ಒಂದು ತಿಂಗಳ “ಟಾಸ್ಕ್ ‘ ನೀಡಲಾಗಿದೆ.

ವಿಸ್ತಾರಕರ ರೀತಿ ಉಸ್ತುವಾರಿಗಳೂ ಕೆಲಸ ಮಾಡುವ ಜೊತೆಗೆ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಇರುವ ಗೊಂದಲ ಶಮನ ಮಾಡಬೇಕು. ಸಂಭಾವ್ಯ ಆದರೆ ಗೆಲ್ಲುವ ಅಭ್ಯರ್ಥಿಯ ಹೆಸರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರಿಗೆ ಮುಚ್ಚಿದ ಲಕೋಟೆಯಲ್ಲಿ ತಲುಪಿಸುವಂತೆ ಸೂಚಿಸಲಾಗಿದೆ. ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಇದು ಚುನಾವಣಾ ಸಮಯ. ನಾವೆಲ್ಲರೂ ದಣಿವರಿಯದೆ ಕೆಲಸ ಮಾಡಬೇಕಿದೆ. ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.
ಪಕ್ಷವನ್ನು ಬಲಪಡಿಸಲು ಬಿಜೆಪಿಯ ರಥಯಾತ್ರೆ ಮಾರ್ಚ್ ಒಂದರಿಂದ ಆರಂಭವಾಗಲಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ಆರಂಭವಾಗಲಿದೆ. ರಥ ಯಾತ್ರೆಯ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಬಡವರ ಪರವಾದ ಸರ್ಕಾರವಾಗಿದೆ ಎಂದು ಹೇಳಿ, ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು. ಕೋವಿಡ್ ನಂತರದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಗುರಿ ಮೀರಿ GST ಸಂಗ್ರಹಿಸಿದೆ. ಬಡವರ ಪರವಾಗಿರುವ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ನಮ್ಮದಾಗಬೇಕು ಎಂದರು.

ರಾಜ್ಯದ ಬಿಜೆಪಿ ಸರ್ಕಾರ ಸ್ಪಂದನಶೀಲ ಜನಪರ ಸರ್ಕಾರವಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಿದ್ದೇವೆ. ಪ್ರವಾಹ ಸಂತ್ರಸ್ತರಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದಲ್ಲದೆ, ಕೋವಿಡ್‌ನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಪ್ರಶಂಸಿಸಿದರು. ಮುಂದಿನ ಚುನಾವಣೆಯಲ್ಲಿ ಸರ್ಕಾರದ ಪ್ರಗತಿ ವರದಿಯನ್ನು ಮುಂದಿಟ್ಟುಕೊಂಡು ಪಕ್ಷಕ್ಕೆ ಗೆಲುವು ತಂದುಕೊಂಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
Congress ಪಕ್ಷ ಸ್ವಜನಪಕ್ಷಪಾತ, ಭ್ರಷ್ಟಾಚಾರ ಎಸಗಿ ಈಗ ನಮ್ಮ ಮೇಲೆ ನಿರಂತರ ಆರೋಪ ಮಾಡುವ ಕೆಲಸ ಮಾಡುತ್ತಿದೆ. ಅವರ ಆರೋಪಗಳಲ್ಲಿ ಹುರುಳಿಲ್ಲ. ತಾವು ಹಿಂದೆ ಮಾಡಿದ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಗಿಸಿ ಬಿಟ್ಟರು. ರಾಜ್ಯ ಸರ್ಕಾರದ ವಿರುದ್ಧ ಭ್ರ ಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್ ದಾಖಲೆಗಳನ್ನೆ ಕೊಟ್ಟಿಲ್ಲ. ದಾಖಲೆ ಕೊಟ್ಟರೆ ತನಿಖೆ ಮಾಡಿಸುವುದಾಗಿಯೂ ಹೇಳಿದರು. ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ. ಇದನ್ನು ಜನರಿಗೆ ತಲುಪಿಸಿ ಎಂದು ಅವರು ಹೇಳಿದರು.

ಬಿಜೆಪಿಗೆ ಮತ್ತೆ ಅಧಿಕಾರ:
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್‌ಗೆ ನಾಯಕತ್ವ ಇಲ್ಲ, ಭವಿಷ್ಯವೂ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳು ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದು ಕೊಡಲಿವೆ ಎಂದ ಅವರು, ಬಿಜೆಪಿಗೆ ಮೋದಿ ನಾಯಕತ್ವವಿದೆ. ಕಾಂಗ್ರೆಸ್‌ಗೆ ಸರಿಯಾದ ನಾಯಕತ್ವವೇ ಇಲ್ಲ ಎಂದು ಗೇಲಿ ಮಾಡಿದರು.

