ಬೆಂಗಳೂರು, ಏ.12- ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕು ಎಂದು ಸಾಕಷ್ಟು ಅಳೆದು ತೂಗಿ ವಿಧಾನಸಭೆ Electionಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ ಬೆನ್ನಲ್ಲೇ ಟಿಕೆಟ್ ವಂಚಿತರು ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕೆಲವರು ಪಕ್ಷಕ್ಕೆ ಗುಡ್ ಬೈ ಹೇಳತೊಡಗಿದ್ದಾರೆ.ಈ ರಾಜೀನಾಮೆ ಪರ್ವ ಕಮಲ ಪಾಳಯದಲ್ಲಿ ಕಂಪನ ಸೃಷ್ಟಿಸಿದೆ.
ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಗೂಳಿಹಟ್ಟಿ ಶೇಖರ್, ಸೊಗಡು ಶಿವಣ್ಣ, ಶಾಸಕರಾದ ರಘುಪತಿ ಭಟ್ ಸೇರಿದಂತೆ ಹಲವರು ಬಂಡಾಯ ಅಭ್ಯರ್ಥಿಗಳಾಗಿ ಅಥವಾ ಬೇರೆ ಪಕ್ಷದ ಹುರಿಯಾಳುಗಳಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿರುವುದು ಬಿಜೆಪಿ ನಾಯಕರಿಗೆ ತಲೆನೋವು ತರಿಸಿದೆ.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈಗಾಗಲೇ ಬಿಜೆಪಿಗೆ ಗುಡ್‍ಬೈ ಹೇಳಿದ್ದರೆ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಕೂಡ ಪಕ್ಷ ಬಿಡುವ ಸುಳಿವು ಕೊಟ್ಟಿದ್ದು, ಜನಾರ್ದನರೆಡ್ಡಿ ನೇತೃತ್ವದ ಕೆಕೆಪಿಪಿ ಪಕ್ಷವನ್ನು ಸೇರ್ಪಡೆಯಾಗಲು ಸಜ್ಜಾಗಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು, ವರಿಷ್ಠರ ಮನವೊಲಿಕೆಗೂ ಜಗ್ಗದ ಅಸಮಾಧಾನಿತರು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಬೇರೆ ಬೇರೆ ಪಕ್ಷಗಳತ್ತ ಮುಖ ಮಾಡುತ್ತಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಬೆಳಗಾವಿ ಜಿಲ್ಲೆ, ಅಥಣಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಗಾಣಿಗ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೂ ರಾಜೀನಾಮೆ ಘೋಷಿಸಿರುವುದು ಕಮಲ ಪಾಳಯಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ.
ಮೂಲಗಳ ಪ್ರಕಾರ, ಸವದಿ ಗುರುವಾರ ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಳವಾಗಿದ್ದು, ಅಥಣಿಯಿಂದಲೇ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮ್ಯಾಸ ನಾಯಕ, ಚಳ್ಳಕೆರೆಯಿಂದ ಚಿತ್ರನಟ ಶಶಿಕುಮಾರ್ ಸೇರಿದಂತೆ ಅನೇಕರು ಪಕ್ಷದ ತೀರ್ಮಾನದ ವಿರುದ್ಧ ಸಡ್ಡು ಹೊಡೆಯುವ ಮುನ್ಸೂಚನೆ ಕೊಟ್ಟಿದ್ದಾರೆ.
ತುಮಕೂರು ನಗರದ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಸಡ್ಡು ಹೊಡೆಯುವ ಸಾಧ್ಯತೆ ಇದೆ. ಹಾಲಿ ಶಾಸಕ ಜ್ಯೋತಿ ಗಣೇಶ್‍ಗೆ ಟಿಕೆಟ್ ಘೋಷಣೆ ಮಾಡಿರುವುದು ಅವರ ಕಣ್ಣು ಕೆಂಪಾಗಿಸಿದೆ.ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸೊಗಡು ಶಿವಣ್ಣ ಘೋಷಣೆ ಮಾಡಿರುವುದು ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ಸವದಿ ಮನವೊಲಿಕೆ :
ಮತ್ತೊಂದೆಡೆ ಕಾಂಗ್ರೆಸ್ ಸೆರಲು ಸಜ್ಜುಗೊಂಡಿರುವ ಹಿರಿಯ ನಾಯಕ ಲಕ್ಷ್ಮಣ ಸವದಿ ಅವರನ್ನ ಸಮಾಧಾನಪಡಿಸುವ ಕೆಲಸ ಆರಂಭವಾಗಿದೆ.ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದು ಪಕ್ಷ ತೊರೆದಂತೆ ಮನವಿ ಮಾಡಲಾಗಿದೆ.
ಸಿ ಎಂ ಮನವಿ:
ಈ ನಡುವೆ ಯಾವುದೇ ಕಾರಣಕ್ಕೂ ಲಕ್ಷ್ಮಣ ಸವದಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಪಕ್ಷದಲ್ಲಿ ಅವರಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಉತ್ತಮ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೂ ಲಕ್ಷ್ಮಣ ಸವದಿಗೂ ಅವಿನಾಭಾವ ಸಂಬಂಧವಿದೆ. ಟಿಕೆಟ್ ಕೈತಪ್ಪಿರುವುದಕ್ಕೆ ಅವರು ಅಸಮಾಧಾನಗೊಂಡಿರುವುದು ನಿಜ. ಅವರ ಜತೆ ನಾನು ದೂರವಾಣಿ ಮೂಲಕ ಮಾತನಾಡಿದ್ದೇನೆ. ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದ್ದೇನೆ. ಬರುವ ದಿನಗಳಲ್ಲಿ ಅವರಿಗೆ ಪಕ್ಷ ಉತ್ತಮವಾದ ಸ್ಥಾನಮಾನ ನೀಡಲಿದೆ ಎಂಬ ಆಶ್ವಾಸನೆ ನೀಡಿದರು.
ಲಕ್ಷ್ಮಣ ಸವದಿ ನನ್ನ ಬಗ್ಗೆ ಹೇಳಿರುವುದು ಅಪ್ರಸ್ತುತ. ನಾನು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಹೋಗುವ ಪ್ರಯತ್ನ ಮಾಡಿರಲಿಲ್ಲ. ಮನೆಯಲ್ಲೇ ಇದ್ದಾಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ದೂರವಾಣಿ ಮೂಲಕ ಕರೆ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟರು. ನನ್ನ ಜತೆ ಆಗ ಸವದಿ, ಸಿ.ಸಿ.ಪಾಟೀಲ್, ಇದ್ದರು. ನಾನು ಸ್ಥಿತಪ್ರಜ್ಞ ಎಂದು ಪರೋಕ್ಷವಾಗಿ ಸವದಿ ಹೇಳಿಕೆಗೆ ತಿರುಗೇಟು ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಅವರು ದೆಹಲಿಗೆ ಹೋಗಿದ್ದಾರೆ. ಅಲ್ಲಿ ಮಾತನಾಡುತ್ತಾರೆ, ಮುಂದೇನಾಗುತ್ತದೆಯೋ ನೋಡೋಣ ಎಂದರು.
ಕೆಲವು ಅಸಮಾಧಾನಿತರ ಮೇಲೆ ನಾನೇ ಮಾತನಾಡಿದ್ದೇನೆ. ಬಹುತೇಕ ಎಲ್ಲ ಕ್ಷೇತ್ರಗಳಿಗೂ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು.
ಮೊದಲ ಹಂತದಲ್ಲಿ ವರಿಷ್ಠರು 189 ಕ್ಷೇತ್ರಗಳಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಎರಡು ದಿನಗಳಲ್ಲಿ ಉಳಿದಿರುವ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಬಹುದು. ಈ ಬಾರಿ ನಮಗೆ ಖಂಡಿತವಾಗಿಯೂ ಬಹುಮತ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.