ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ.
ಇದರ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲೂ ಅಕ್ರೋಶ ವ್ಯಕ್ತವಾಗಿದೆ ಇದರಿಂದ ಬೆಚ್ಚಿದ ಬಿಜೆಪಿ ನಾಯಕತ್ವ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪಕ್ಕೆ ಗುರಿಯಾಗಿರುವ ನೂಪುರ್ ಶರ್ಮಾ
ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದೆ.
ನೂಪುರ್ ಶರ್ಮಾ ಅವರು ವಿವಿಧ ವಿಷಯಗಳ ಬಗ್ಗೆ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇದು ಪಕ್ಷದ ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಪಕ್ಷದ ಶಿಸ್ತು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇವರ ಜೊತೆಯಲ್ಲಿ ಬಿಜೆಪಿ ದೆಹಲಿ ಘಟಕದ ಮಾಧ್ಯಮ ವಿಭಾಗದ ನೇತೃತ್ವ ವಹಿಸಿದ್ದ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಜಿಂದಾಲ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರುವುದಲ್ಲದೆ, ಪಕ್ಷದ ಸಂವಿಧಾನಕ್ಕೂ ವಿರುದ್ಧವಾಗಿದೆ ಎಂದು ಬಿಜೆಪಿ ತನ್ನ ಅಮಾನತು ಆದೇಶದಲ್ಲಿ ಹೇಳಿದೆ.
ಶರ್ಮಾ ಮತ್ತು ನವೀನ್ ಅವರ ಹೇಳಿಕೆಗಳ ಬಳಿಕ, ಕೆಲ ದೇಶಗಳಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿ, ಟ್ವಿಟರ್ ಅಭಿಯಾನ ನಡೆದಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಕಾನ್ಪುರದಲ್ಲಿ ಉದ್ರಿಕ್ತ ಜನರ ಗುಂಪು ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸಲು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು, ಎರಡು ಗುಂಪುಗಳು ಪರಸ್ಪರ ಬಾಂಬ್ ಎಸೆದು, ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು.
Previous Articleಬಿಬಿಎಂಪಿ ಚುನಾವಣೆ: ಇವರಿಗೆ ಮಾತ್ರ ಬಿಜೆಪಿ ಟಿಕೆಟ್!
Next Article ಕೋವಿಡ್ ಹೆಚ್ಚಳ : ಭಯ ಬೇಡ