ಮುಂಬರುವ ಲೋಕಸಭಾ Electionಯ ರಿಹರ್ಸಲ್ ಎಂದೇ ಪರಿಗಣಿಸಲಾದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ಆಡಳಿತ ವಿರೋಧಿ ಅಲೆ,ಭಿನ್ನಮತ ಕಮೀಷನ್ ಆರೋಪದಿಂದ ನಲುಗಿದ ಮಧ್ಯ ಪ್ರದೇಶದಲ್ಲಿ ಮತದಾರ ಈ ಬಾರಿ ಕಾಂಗ್ರೆಸ್ ಗೆ ಮನ್ನಣೆ ನೀಡಲಿದ್ದಾನೆ ಎಂಬ ವಾತಾವರಣ ಮನೆ ಮಾಡಿತ್ತು. ಚುನಾವಣೆ ಪೂರ್ವ ನಡೆದ ಹಲವಾರು ಸಮೀಕ್ಷೆಗಳು ಬಿಜೆಪಿ ಆಡಳಿತ ಕೊನೆಯಾಗಲಿದೆ ಎಂದು ತಿಳಿಸಿದ್ದವು.
ಆದರೆ, ನಂತರದಲ್ಲಿ ನಡೆದ ವಿದ್ಯಮಾನಗಳು ಹಾಗೂ ಕಾಂಗ್ರೆಸ್ ಚುನಾವಣಾ ಸಾರಥಿ ಕಮಲ್ ನಾಥ್ (Kamal Nath) ಅವರ ಧೋರಣೆ ಜಯವನ್ನು ಚಿನ್ನದ ಹರಿವಾಣದಲ್ಲಿಟ್ಟು ಬಿಜೆಪಿಗೆ ಕೊಡುವಂತಾಯಿತು ಎಂಬ ಸತ್ಯ ಬೆಳಕಿಗೆ ಬಂದಿದೆ.
ಡಬಲ್ ಎಂಜಿನ್ ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರ ಪರಿಣಾಮ ಫಲಿತಾಂಶ ಬರುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಜನರ ಹೃದಯದಲ್ಲಿದ್ದಾರೆ. ಈ ರಾಜ್ಯವೂ ಸಹ ಮೋದಿ ಅವರ ಹೃದಯದಲ್ಲಿದೆ. ರಾಜ್ಯದಲ್ಲಿ ಮೋದಿ ಅವರ ಬಗ್ಗೆ ಅಪಾರ ನಂಬಿಕೆ ಇದೆ. ಅವರು ಸಾರ್ವಜನಿಕ ರ್‍ಯಾಲಿಗಳನ್ನು ನಡೆಸಿ ಮಾಡಿದ ಮನವಿ ಜನರ ಹೃದಯವನ್ನು ಮುಟ್ಟಿದೆ. ಅದು ಫಲಿತಾಂಶದಲ್ಲಿ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇದು ಮೇಲ್ನೋಟಕ್ಕೆ ಸತ್ಯವೆಂದು ಕಂಡರೂ ವಾಸ್ತವ ಸಂಪೂರ್ಣ ಬೇರೆಯೆದ್ದೇ ಆಗಿದೆ.ಕಾಂಗ್ರೆಸ್ ನ ತಂತ್ರ,
ಚುನಾವಣಾ ಪ್ರಚಾರ ಎಲ್ಲವೂ ಸರಿಯಾದ ದಿಕ್ಕಿನಲ್ಲಿ ಸಾಗಿತ್ತು. ಜೊತೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಕೂಡಾ ಸಾಕಷ್ಟು ಪರಿಣಾಮ ಬೀರಿತ್ತು. ಆದರೆ,ಎಲ್ಲವನ್ನೂ ಹಾಳು ಮಾಡಿದ್ದು ಕಮಲ್ ನಾಥ್ ಅವರ ಧೋರಣೆ ಹಾಗೂ ಕಾರ್ಯಶೈಲಿ.
ಮೊದಲಿಗೆ ನಾನೇ ಸರ್ವೋತ್ತಮ ಎಂಬ ಕಮಲ್ ನಾಥ್ ಅವರ ಕಾರ್ಯಶೈಲಿ ಕಾರ್ಯಕರ್ತರನ್ನು ಪಕ್ಷದಿಂದ ದೂರ ಇರುವಂತೆ ಮಾಡಿದರೆ,ಇವರ ಅಹಂಕಾರದ ನಡವಳಿಕೆ ಇತರೆ ನಾಯಕರಿಗೆ ಮುಜುಗರ ತಂದೊಡ್ಡಿತು.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ,ರಾಹುಲ್,ಪ್ರಿಯಾಂಕಾ ಯಾರೊಬ್ಬರ ಮಾತು ಕೇಳದ ಕಮಲ್‌ನಾಥ್ ತಮ್ಮ ಮೂಗಿನ ನೇರಕ್ಕೆ ನಿರ್ಧಾರ ತೆಗೆದುಕೊಂಡು ಅದನ್ನು ಎಲ್ಲರ ಮೇಲೂ ಹೇರಿದರು.ಚುನಾವಣೆ ಸಮಯ ಎಂದೂ ಯಾವ ನಾಯಕರೂ ಇದನ್ನು ಬಹಿರಂಗವಾಗಿ ವಿರೋಧಿಸದಿದ್ದರೂ ಕಾರ್ಯಕರ್ತರು ಮಾತ್ರ ಇದನ್ನು ಒಪ್ಪಲಿಲ್ಲ.
ಇನ್ನೂ ಹಿಂದೂ ಪರವಾದ ಮತಗಳ ಕ್ರೋಡೀಕರಣ ದೃಷ್ಟಿಯಿಂದ ಇವರ ನಡವಳಿಕೆ ಯಾರನ್ನೂ ನಂಬಿಸಲಿಲ್ಲ.ಪ್ರಬಲ ಹಿಂದುತ್ವ ಪ್ರತಿಪಾದನೆಯ ಬಿಜೆಪಿ ತಮ್ಮ ಆಯ್ಕೆ ಮಾಡಿಕೊಂಡ ಮತದಾರರು ಕಮಲ್ ನಾಥ್ ಅವರ ಹಿಂದುತ್ವ ನಿಲುವು ಒಪ್ಪಲಿಲ್ಲ. ಅದು ಇವರ ಪಾಲಿಗೆ ಗಿಮಿಕ್ ಎಂದು ಕಾಣಿಸಿದರೆ, ದಲಿತ,ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತದಾರರ ವಿಶ್ವಾಸಗಳಿಸುವಲ್ಲಿ ವಿಫಲವಾಯಿತು.
ಇದರ ನಡುವೆ ದಿಗ್ವಿಜಯ್ ಸಿಂಗ್ ಸೇರಿದಂತೆ ಕೆಲವು ನಾಯಕರ ವರ್ತನೆಗಳು ಕಾಂಗ್ರೆಸ್ ಪಕ್ಷದ ಮತದಾರರ ಒಲವನ್ನು ಬಿಜೆಪಿಯತ್ತ ತಿರುಗುವಂತೆ ಮಾಡಿತು.