ಬೆಂಗಳೂರು.ಸೆ,12:
ಆಂತರಿಕ ಭಿನ್ನಮತ ವೈಯಕ್ತಿಕ ಪ್ರತಿಷ್ಠೆ ಮತ್ತು ಒಳಜಗಳಗಳಿಂದ ತತ್ತರಿಸಿರುವ ರಾಜ್ಯ ಬಿಜೆಪಿ ನಾಯಕರ ಕಿವಿ ಹಿಂಡಿರುವ ಸಂಘ ಪರಿವಾರ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಮತ್ತು ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ತಾಕೀತು ಮಾಡಿದೆ.
ಬಿಜೆಪಿ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಂಘ ಪರಿವಾರದ ನಾಯಕನನ್ನು ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ನಿಯೋಜಿಸಲಾಗುತ್ತದೆ ಇಲ್ಲಿಯವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ ವಿರುದ್ಧ ಕೆಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹುದ್ದೆ ಖಾಲಿಯಿದ್ದು ಪಕ್ಷ ಮತ್ತು ಪರಿವಾರದ ನಡುವಿನ ಸಂಪರ್ಕ ಕಡಿತಗೊಂಡಿದೆ ಈ ಹಿನ್ನೆಲೆಯಲ್ಲಿ ಪಕ್ಷದ ವಿದ್ಯಮಾನಗಳ ಮೇಲೆ ಸಂಘ ಪರಿವಾರ ನಿಗಮ ವಹಿಸಲು ಸಾಧ್ಯವಾಗಿಲ್ಲ. ಇದು ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಲು ಕಾರಣವಾಗಿದೆ.
ಇದರಿಂದ ಪಕ್ಷ ಸಂಘಟನೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ
ಇದೀಗ ಸಂಘ ಪರಿವಾರ ಮಧ್ಯಪ್ರವೇಶ ಮಾಡಿದೆ
ಪರಿವಾರ ನಾಯಕರಾದ ಬಿ.ಎಲ್. ಸಂತೋಷ್, ಮುಕುಂದ್, ಸುಧೀರ್, ನಾಗರಾಜು ತಿಪ್ಪೇಸ್ವಾಮಿ ಕೆಲವು ಪ್ರಮುಖರು ರಾಜ್ಯ ಬಿಜೆಪಿ ಉಸ್ತುವಾರಿ ಡಾ| ರಾಧಾ ಮೋಹನ್ ಅಗರ್ವಾಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಪ್ರತಾಪಸಿಂಹ, ಅರವಿಂದ ಲಿಂಬಾವಳಿ, ಸಿ.ಟಿ. ರವಿ, ವಿ. ಸುನಿಲ್ ಕುಮಾರ್, ಅರವಿಂದ ಬೆಲ್ಲದ್ ಸಹಿತ ಸುಮಾರು 40 ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿದರು.
ಚನ್ನೇನಹಳ್ಳಿಯಲ್ಲಿರುವ ಆರೆಸ್ಸೆಸ್ ಕಚೇರಿಯಲ್ಲಿ ಬೆಳಗ್ಗಿನ ಉಪಾಹಾರದೊಂದಿಗೆ ಆರಂಭವಾದ ಸಭೆ , ಮಧ್ಯಾಹ್ನದವರೆಗೆ ನಡೆಯಿತು.
ಸಭೆಯಲ್ಲಿ ನಾಯಕರ ಒಳಜಗಳ,ವೈಯಕ್ತಿಕ ಪ್ರತಿಷ್ಠೆ ಹಾಗೂ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದ ಸಂಘ ಪರಿವಾರ ನಾಯಕರು ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಏಕಪಕ್ಷಿಯವಾಗಿ ಕೆಲವು ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದಾರೆ ನಿಯಮಿತವಾಗಿ ಪಕ್ಷದ ಪದಾಧಿಕಾರಿಗಳ ಸಭೆ ಮತ್ತು ಪ್ರಮುಖರ ಜೊತೆ ಚರ್ಚೆ ನಡೆಸುತ್ತಿಲ್ಲ ಎಂಬ ಅಂಶವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಪರಿವಾರ ನಾಯಕರು ಇನ್ನು ಮುಂದೆ ಇಂತಹ ಅಪಸ್ವರಗಳಿಗೆ ಅವಕಾಶ ನೀಡಬಾರದು ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ತಕ್ಷಣವೇ ಭರ್ತಿ ಮಾಡಬೇಕು ನಾಲ್ಕು ವಿಭಾಗಿಯ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಅವರ ವರದಿ ಪಡೆದು ಸಂಘಟನಾತ್ಮಕವಾಗಿ ನಿರ್ಧಾರ ಕೈಗೊಳ್ಳುವಂತೆ ಸಲಹೆ ಮಾಡಿದರು ಎನ್ನಲಾಗಿದೆ.
ನಾಯಕರ ನಡುವೆ ಹೊಂದಾಣಿಕೆಯ ಕೊರತೆಯಿಂದಾಗಿ ಮೈಸೂರು ಪಾದಯಾತ್ರೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ ಹೀಗಾಗಿ ಸದ್ಯ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಯೋಜಿತ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿರುವುದಾಗಿ ಮೂಲಗಳನ್ನು ತಿಳಿಸಿವೆ.
ಆಡಳಿತರೂಡ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತವಾಗಿದೆ ಬಹುಸಂಖ್ಯಾತ ಹಿಂದೂಗಳ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತಿಲ್ಲ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿರೋಧಿಯಾದ ಸರ್ಕಾರ ಇದಾಗಿದೆ ಎಂಬ ರೀತಿಯಲ್ಲಿ ಜನ ಅಭಿಪ್ರಾಯ ಮೂಡಿಸಬೇಕು ಎಂದು ಸೂಚಿಸಿದ ಪರಿವಾರ ನಾಯಕರು ಬಸನಗೌಡ ಪಾಟೀಲ ಯತ್ನಾಳ್ ಅವರ ಸಕ್ಕರೆ ಕಾರ್ಖಾನೆ ಪರವಾಗಿ ಎಲ್ಲರೂ ಹೋರಾಟ ನಡೆಸಬೇಕು ಪಕ್ಷದ ಎಲ್ಲಾ ನಾಯಕರು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸುವ ಮೂಲಕ ಸದಸ್ಯತ್ವ ಚಳುವಳಿಯನ್ನು ಯಶಸ್ವಿಗೊಳಿಸಲು ಸೂಚಿಸಿದರು ಎಂದು ತಿಳಿದುಬಂದಿದೆ.