ಬೆಂಗಳೂರು,ಅ.29:
ವಕ್ಪ್ ಆಸ್ತಿ ಒತ್ತುವರಿ ತೆರವು ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದೆ. ಒತ್ತುವರಿ ತೆರವಿನ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಮರ ಸಾರಿರುವ ಬೆನ್ನಲ್ಲೇ ಸ್ಫೋಟಕ ಮಾಹಿತಿಯೊಂದನ್ನು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಬಹಿರಂಗಪಡಿಸಿದ್ದಾರೆ
ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಆದರೆ 2019ರಿಂದ 2022ರವರೆಗೆ ರಾಜ್ಯದಲ್ಲಿ ಅವರದೇ ಸರಕಾರವಿದ್ದಾಗ ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್ ಮಂಡಳಿ ಮೂಲಕ ನೋಟಿಸ್ ಕೊಡಲಾಗಿತ್ತು ಎಂದು ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಬಿಜೆಪಿಯವರಿಗೆ ತಮ್ಮ ಸರ್ಕಾರದ ಅವಧಿಯಲ್ಲಿ ಇರದ ಹಿಂದೂ ಪ್ರೇಮವನ್ನು ಈಗ ಕಪೋಲಕಲ್ಪಿತ ಸುಳ್ಳುಗಳ ಮೂಲಕ ವ್ಯಕ್ತಪಡಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ
ಬಿಜೆಪಿಯವರು ತಮ್ಮದೇ ಸರಕಾರವಿದ್ದಾಗ ರಾಜ್ಯದ ಅಭಿವೃದ್ಧಿಯನ್ನು ಮರೆತು ಹಿಜಾಬ್, ಹಲಾಲ್, ಉರಿಗೌಡ-ನಂಜೇಗೌಡ ಎಂದು ನಾಟಕವಾಡಿದರು. ಈಗ ವಕ್ಫ್ ಆಸ್ತಿ ಹೆಸರಿನಲ್ಲಿ ಆ ನಾಟಕವನ್ನು ಮುಂದುವರಿಸಲಾಗುತ್ತಿದೆ. ಸುಳ್ಳಿನ ಕಂತೆ ಕಟ್ಟಿ ಜನರ ಕಣ್ಣಿಗೆ ಮಣ್ಣೆರಚುವ ಇವರ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರಚಿಸಿರುವ ಸತ್ಯ ಶೋಧನಾ ಸಮಿತಿಯನ್ನು ಅವರದೇ ಪಕ್ಷದ ಬಸನಗೌಡ ಪಾಟೀಲ ಯತ್ನಾಳ ಅವರು ಹಿಗ್ಗಾಮುಗ್ಗಾ ಟೀಕಿಸಿದ ಮೇಲೆ ಪುನಾರಚಿಸಲಾಗಿದೆ. ಇಷ್ಟೆಲ್ಲ ಆದಮೇಲೆ ಯತ್ನಾಳ್ ಜೊತೆಗೆ ಸಂಸದ ರಮೇಶ ಜಿಗಜಿಣಗಿ ಅವರುಗಳನ್ನು ಸೇರಿಸಿದಂತೆ ನಟಿಸಲಾಗಿದೆ. ಇದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಇದನ್ನು ಬಿಟ್ಟು, ತಮ್ಮ ಸರಕಾರದ ಅವಧಿಯಲ್ಲಿ ನಮ್ಮ ರೈತರಿಗೆ ಕೊಟ್ಟ ನೋಟೀಸುಗಳಿಗೆ ಮೊದಲು ಉತ್ತರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ಹೇಳಿ ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಇಲ್ಲದ ಸಮಸ್ಯೆಯನ್ನು ಹುಟ್ಟುಹಾಕುತ್ತಿರುವ ಬಿಜೆಪಿ ನಾಯಕರು ತಮ್ಮ ನಡುವೆ ಇರುವ ಸಮಸ್ಯೆಗಳನ್ನು ಮೊದಲು ಬಗೆಹರಿಸಿಕೊಳ್ಳಲಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
Previous Articleಪುನೀತ್ ರಾಜ್ ಕುಮಾರ್ ಕಣ್ಮರೆಯಾಗಿ ಇಂದಿಗೆ 3 ವರ್ಷ.
Next Article ಮುಡಾ-ಬಿಗಿಯಾಗುತ್ತಿದೆ ಇಡಿ ಉರುಳು.