ಬೆಂಗಳೂರು, ಮಾ.27- ಲೋಕಸಭೆ Electionಯಲ್ಲಿ ಈ ಬಾರಿ ಅತ್ಯಧಿಕ ಸ್ಥಾನ ಇದೆಲ್ಲ ಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ (BJP) ಭಿನ್ನಮತದ ಧಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೈಕಮಾಂಡ್ ಸೂಚನೆಯ ಮೇರೆಗೆ ಬಂಡಾಯ ಶಮನದ ಅಖಾಡಕ್ಕೆ ಧುಮುಕಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಹೊರತುಪಡಿಸಿ ಉಳಿದ ಕಡೆ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಸಾರಿರುವ ನಾಯಕರ ಜೊತೆ ಮಾತುಕತೆ ನಡೆಸಿದರು.
ಯಡಿಯೂರಪ್ಪ ಅವರು ನಡೆಸಿದ ಸಂದಾನದ ಪರಿಣಾಮವಾಗಿ ತುಮಕೂರು ದಾವಣಗೆರೆ ಬೆಳಗಾವಿ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಂಡಾಯ ಶಮನಗೊಂಡಿದೆ ಎಂಬಂತೆ ಕಾಣುತ್ತಿದೆಯಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು ಯಾವುದೇ ಸಮಯದಲ್ಲೂ ಧಗಧಗಿಸಬಹುದಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದ ಅಧಿಕೃತ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಮಾಧುಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದರು .ಯಡಿಯೂರಪ್ಪ ಅವರು ನೀಡಿದ ಸಲಹೆಗೆ ಸಮ್ಮತಿಸಿದ ಮಾಧುಸ್ವಾಮಿ ಬಂಡಾಯದ ಬಾವುಟ ಇಳಿಸಿದರಾದರು ಚುನಾವಣೆಯಲ್ಲಿ ಸೋಮಣ್ಣ ಪರ ಕೆಲಸ ಮಾಡುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಣಿಸಿಕೊಂಡಿರುವ ಬಂಡಾಯ ಶಮನಗೊಳಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸಭೆ ಕರೆದು ವಿಫಲರಾಗಿದ್ದ ಯಡಿಯೂರಪ್ಪ ಅವರು ದಾವಣಗೆರೆಗೆ ತೆರಳಿ ಎಲ್ಲ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.
ಪಕ್ಷದ ಅಭ್ಯರ್ಥಿ ಜಿಎಂ ಸಿದ್ದೇಶ್ವರ್ ಅವರ ಪತ್ನಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆ ಹಾಕಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಬಣ ಇದೀಗ ತಮ್ಮ ನಿಲುವು ಬದಲಾಯಿಸಿದೆ. ಯಡಿಯೂರಪ್ಪ ಅವರು ನೀಡಿದ ಸಲಹೆಗೆ ಸಮ್ಮತಿಸಿದ ಈ ಬಣ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಹೆಸರು ಹೇಳಿ ಮತಯಾಚಿಸುವುದಿಲ್ಲ ಮೊದಲಿಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಪರವಾಗಿ ಮತಯಾಚಿಸುತ್ತೇವೆ ಎಂದು ತಿಳಿಸಿದೆ. ಆದರೆ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಈ ವಿಷಯವಾಗಿ ಏನನ್ನು ಹೇಳದಿರುವುದು ಇನ್ನು ಬಿಕ್ಕಟ್ಟು ಶಮನಗೊಂಡಿಲ್ಲ ಎಂಬುದರ ಸಂಕೇತವಾಗಿದೆ.
ಕೊಪ್ಪಳದಲ್ಲಿ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಅವರು ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ನಾಯಕರ ಸಂಧಾನಕ್ಕೆ ಮಣಿದಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇಲ್ಲವೇ ಪಕ್ಷಾಂತರ ಮಾಡುವ ನಿರ್ಧಾರ ಕೈ ಬಿಟ್ಟಿದ್ದಾರೆ ಆದರೆ ತಮ್ಮ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂಬ ಆಹ್ವಾನವನ್ನು ತಿರಸ್ಕರಿಸಿರುವುದು ಚುನಾವಣೆಯಲ್ಲಿ ಅವರು ತಟಸ್ಥ ನಿಲುವು ತಳಯಬಹುದು ಎಂಬ ಸಂದೇಹ ಉಂಟುಮಾಡಿದೆ.
ರಾಯಚೂರಿನಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದ ಮಾಜಿ ಸಂಸದ ಬಿ ವಿ ನಾಯಕ್ ಅವರು ಪಕ್ಷಾಂತರ ಮಾಡುವ ನಿರ್ಧಾರ ಕೈ ಬಿಟ್ಟಿದ್ದು ಇದೀಗ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆ ಅಲ್ಲವೇ ತಮ್ಮ ಬೆಂಬಲಿಗರಿಗೆ ತಮಗೆ ಸೂಕ್ತವೆನಿಸುವ ತೀರ್ಮಾನ ಕೈಗೊಳ್ಳುವಂತೆ ಹೇಳಿರುವುದು ಬಿಜೆಪಿಗೆ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉಂಟಾಗಿದ್ದ ಬಿಕ್ಕಟ್ಟು ಶಮನಗೊಳಿಸಲು ಹಲವು ಸುತ್ತಿನ ಸಭೆ ನಡೆಸಿ ಕೊಂಚಮಟ್ಟಿಗೆ ಯಶಸ್ಸು ಸಾಧಿಸಿರುವ ಯಡಿಯೂರಪ್ಪ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.
ಆದರೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಅವರ ಸಭೆಯಿಂದ ದೂರ ಉಳಿದಿದ್ದು ಹಾಗೂ ಮಾಜಿ ಸಂಸದ ಪ್ರಭಾಕರ ಕೋರೆ ಅವರು ಯಡಿಯೂರಪ್ಪ ಅವರ ಸಲಹೆಯನ್ನು ತಿರಸ್ಕರಿಸಿರುವುದು ಗೊಂದಲ ಇನ್ನೂ ಬಗೆಹರಿದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಶತ ಸಿದ್ದ ಎಂದಿರುವ ಮಾಜಿ ಸಚಿವ ಈಶ್ವರಪ್ಪ ಅವರ ಜೊತೆ ಬಿಜೆಪಿ ಸದ್ಯಕ್ಕೆ ಯಾವುದೇ ರೀತಿಯ ಮಾತುಕತೆ ನಡೆಸದಿರಲು ತೀರ್ಮಾನಿಸಿದೆ ಹೀಗಾಗಿ ಈ ಬಂಡಾಯ ದಿನಗಳಂತೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.