ಬೆಂಗಳೂರು,ಜ.4- ತಾನು ರಾಮಸೇವಕ. ತನ್ನನ್ನು ಬಂಧಿಸಿ ಎಂದು ಬಿಜೆಪಿಯವರು ಹೇಳುತ್ತಿರುವುದು ಅಪ್ರಸ್ತುತ ಹಾಗೂ ಹಾಸ್ಯಾಸ್ಪದ ವಿಚಾರ ಎಂದು ವ್ಯಂಗ್ಯವಾಡಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ,ಕ್ರಿಮಿನಲ್‍ಗಳಾಗಿದ್ದರೆ, ತಪ್ಪು ಮಾಡಿದರೆ ಮಾತ್ರ ಬಂಧಿಸಲಾಗುತ್ತದೆ. ಅನಗತ್ಯವಾಗಿ ಯಾರನ್ನೂ ಬಂಧಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿನ ಕರಸೇವಕನ ಬಂಧನ ಪ್ರಕರಣದಲ್ಲಿ ರಾಜಕೀಯ ಅನಗತ್ಯ. ಬಾಕಿ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನನ್ನು ಬಿಡುಗಡೆ ಮಾಡಲು ಬಿಜೆಪಿ (BJP) ಗಡುವು ನೀಡಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಏಕೆಂದರೆ ಅದು ಇನ್ನೇನ್ನಿದ್ದರೂ ಕಾನೂನಾತ್ಮಕ ಹೋರಾಟ ನಡೆಯಬೇಕೇ ಹೊರತು, ರಾಜಕೀಯ ಸಂಘರ್ಷದಿಂದ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತೆರಳುವವರಿಗೆ ಸೂಕ್ತ ರಕ್ಷಣ ನೀಡಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿರುವುದರಲ್ಲಿ ತಪ್ಪಿಲ್ಲ. ಜ.22 ರವರೆಗೂ ಅಯೋಧ್ಯೆಗೆ ಹೋಗಿಬರುವವರ ಸಂಖ್ಯೆ ಹೆಚ್ಚಿರುತ್ತದೆ. ಧ್ವಜ ಹಾಕಿಕೊಂಡು ಮೆರವಣಿಗೆ ನಡೆಸಿ ಅಯೋಧ್ಯೆಯತ್ತ ಪ್ರಯಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಘರ್ಷಗಳಾಗಬಹುದು. ಹೀಗಾಗಿ ಹೆಚ್ಚಿನ ಸಮಸ್ಯೆಗಳಾಗದಂತೆ ಪೊಲೀಸರು ಮುಂಜಾಗ್ರತೆ ವಹಿಸಬೇಕಿದೆ ಎಂದು ಹೇಳಿದರು.
ರಾಮಮಂದಿರ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಆದರೆ ಒಂದೇ ಪಕ್ಷ ಮುಂದಾಳತ್ವ ವಹಿಸುವುದ ರಿಂದ ಸಹಜವಾಗಿಯೇ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತವೆ. ಅದರ ಬದಲು ರಾಮ ಸಮಿತಿಯವರು ಎಲ್ಲಾ ಪಕ್ಷದವರ ವಿಶ್ವಾಸ ತೆಗೆದುಕೊಂಡು ಮುನ್ನಡೆದರೆ ಪಕ್ಷಾತೀತವಾಗಿರಲಿದೆ ಎಂದರು.
ರಾಮಮೂರ್ತಿ ಉದ್ಘಾಟನೆಗೆ ಆಯ್ದ ವ್ಯಕ್ತಿಗಳಿಗೆ ಆಹ್ವಾನ ನೀಡಿದ್ದಾರೆ. ಅಲ್ಲಿಗೆ ಹೋಗುವವರಿಗೆ ಆಹ್ವಾನದ ಅಗತ್ಯವೂ ಇಲ್ಲ, ಆಸಕ್ತಿ ಇರುವವರು ಹೋಗಬಹುದು. ತಾವು ತಮ್ಮ ಊರಿನ ರಾಮ ಮಂದಿರದಲ್ಲಿ ಪೂಜೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.