ಬೆಂಗಳೂರು: ಅ,5 – ಭಾರತದ ರಾಜಧಾನಿ ನವದೆಹಲಿಯ ನಂತರ ದೇಶದ ಎರಡನೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊಂದಿರುವ ಮೆಟ್ರೋ ಎಂಬ ಖ್ಯಾತಿ ಪಡೆದಿರುವ ಬೆಂಗಳೂರು ಮೆಟ್ರೋ ಇದೀಗ ತನ್ನ ಪ್ರಯಾಣಿಕರಿಗೆ ಶಾಕ್ ನೀಡಿದ್ದು BMRCL ಮೆಟ್ರೋ ದರ ಹೆಚ್ಚಳ ಪರಿಷ್ಕರಣೆಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿ. (ಬಿಎಂಆರ್ಸಿಎಲ್) ರೈಲ್ವೇ ದರ ನಿಗದಿ ಸಮಿತಿ ಮುಂದಾಗಿದೆ.
ಇದರ ಸಲುವಾಗಿ ಸಾರ್ವಜನಿಕರಿಂದ ಸಲಹೆಗಳನ್ನು ನೀಡಲು ಬಿಎಂಆರ್ಸಿಎಲ್ ಆಹ್ವಾನಿಸಿದ್ದು ಈ ಸಂಬಂಧ ಅಧಿಸೂಚನೆ ಹೊರಡಿಸಿ, ಸಲಹೆಗಳನ್ನು ಇಮೇಲ್ ಮೂಲಕ ffc@bmrc.co.in ಗೆ, ಅಥವಾ ಬಿಎಂಆರ್ಸಿಎಲ್ ಕೇಂದ್ರ ಕಚೇರಿಗೆ ಅಂಚೆ ಮೂಲಕ ಅಕ್ಟೋಬರ್ 21ರ ಒಳಗೆ ಕಳುಹಿಸಬಹುದು ಎಂದು ಹೇಳಿದೆ.
ಈ ಕುರಿತಂತೆ ಮಾತನಾಡಿದ BMRCLನ ಅಧಿಕಾರಿಯೊಬ್ಬರು, ನಾವು ಮೆಟ್ರೋ ಟಿಕೆಟ್ ದರಗಳನ್ನು ಪರಿಷ್ಕರಿಸಲು ಚಿಂತನ ನಡೆಸಿದ್ದೇವೆ. ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ FFC ಹೊಸ ಬೆಲೆಗಳನ್ನು ನಿರ್ಧರಿಸುತ್ತದೆ. ನಾವು ಕನಿಷ್ಠ 15-25% ದರ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ, ಇದು ಹೆಚ್ಚಿನ ಆದಾಯವನ್ನು ಗಳಿಸಲು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
‘ದಿ ಫೇರ್ ಪಿಕ್ಸೇಷನ್ ಕಮಿಟಿ’ (ಎಫ್ಎಫ್ಸಿ) ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಅರೆ ನ್ಯಾಯಾಂಗ ಅಧಿಕಾರಗಳನ್ನು ಹೊಂದಿದೆ. ಇದನ್ನು ಮೆಟ್ರೋ ರೈಲ್ವೇ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ-2002ರ ಅಡಿಯಲ್ಲಿ ರಚಿಸಲಾಗಿದೆ. ಇದು ಮೆಟ್ರೋ ಕಾರ್ಯಾಚರಣೆಯ ಖರ್ಚಿನ ವಿವರಗಳನ್ನು, ಪ್ರಯಾಣಿಕರು ಹಾಗೂ ತಜ್ಞರಿಂದ ಮಾಹಿತಿಯನ್ನೂ ಪಡೆದುಕೊಳ್ಳಲಿದ್ದು ನಂತರದಲ್ಲಿ ಬೆಲೆ ಹೆಚ್ಚಳದ ಬಗ್ಗೆ ಮಾಹಿತಿ ನೀಡಲಿದೆ.
ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಮಾಹಿತಿ ನೀಡಿದ್ದು, ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಈ ಕುರಿತು ಒಂದು ಸಭೆ ಕೂಡಾ ಆಗಿದೆ, ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದೆ. ವರದಿ ಆಧಾರದ ಮೇಲೆ ಮೆಟ್ರೋ ಟಿಕೆಟ್ ದರ ಏರಿಕೆ ಆಗಲಿದೆ. ಸಮಿತಿಯಲ್ಲಿ ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಇರಲಿದ್ದಾರೆ. ಕಮಿಟಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಿದೆ. ಬಿಎಂಆರ್ ಸಿ ಎಲ್ ಖರ್ಚು ವೆಚ್ಚ ನೋಡಿಕೊಂಡು ದರ ಏರಿಕೆ ನಿರ್ಧಾರ ಆಗಲಿದೆ. ನಿಯಮದ ಪ್ರಕಾರ ಕಮಿಟಿ ಮೂರು ತಿಂಗಳ ಒಳಗಾಗಿ ದರ ಏರಿಕೆ ನಿರ್ಧಾರ ಮಾಡಲಿದೆ ಎಂದು ತಿಳಿಸಿದ್ದಾರೆ.
ಇನ್ನು ಕಳೆದ ಬಾರಿ 2017 ರಲ್ಲಿ ಬಿಎಂಆರ್ಸಿಲ್ ಮೆಟ್ರೋ ಟಿಕೆಟ್ ದರವನ್ನು ಪರಿಷ್ಕರಿಸಿತ್ತು. ನಂತರದಲ್ಲಿ ಬೆಲೆ ಹೆಚ್ಚಳದ ಬಗ್ಗೆ ಪ್ರಸ್ತಾಪ ಮಾಡಿದರು ಬೆಲೆ ಹೆಚ್ಚಳ ಮಾಡಿರಲಿಲ್ಲ.ಇದೀಗ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಪರ್ಕ ವ್ಯವಸ್ಥೆ ಹೆಚ್ಚಾಗುತ್ತಿದೆ.
ಪ್ರಸ್ತುತ ಇರುವ ಮೆಟ್ರೋ ದರ
ಮೆಟ್ರೋ ನಿಮಯಗಳ ಪ್ರಕಾರ ಪ್ರತಿ 2 ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಮಾಡಬೇಕು. ಸದ್ಯ ನಮ್ಮ ಮೆಟ್ರೋದಲ್ಲಿ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ 60 ರೂ. ಇದೆ. ಸ್ಮಾರ್ಟ್ ಕಾರ್ಡ್ ಹಾಗೂ ಕ್ಯೂ ಆರ್ ಕೋಡ್ ಟಿಕೆಟ್ ಬುಕ್ ಮಾಡುವವರಿಗೆ ಶೇ. 5ರಷ್ಟು ರಿಯಾಯಿತಿ ಇದೆ. ಆರಂಭದಲ್ಲಿ ಅಂದರೆ 2020ರವರೆಗೆ ಈ ರಿಯಾಯಿತಿ ಶೇ. 15ರಷ್ಟು ಇತ್ತು.
ಕೊನೆಯ ಬಾರಿಗೆ ನಮ್ಮ ಮೆಟ್ರೋ 2017ರಲ್ಲಿ ದರ ಪರಿಷ್ಕರಣೆ ಮಾಡಿತ್ತು. ಫೇಸ್1 ಮೆಟ್ರೋ ಪೂರ್ಣಗೊಂಡಾಗ ಶೇ. 10-15ರಷ್ಟು ದರ ಹೆಚ್ಚಳ ಮಾಡಲಾಗಿತ್ತು.
ಪ್ರಸ್ತುತ 8-9 ಲಕ್ಷ ಜನ ದಿನನಿತ್ಯ ಮೆಟ್ರೋ ಬಳಸುತ್ತಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ನಾಗಸಂದ್ರ – ಮಾದಾವರ ಮಾರ್ಗವೂ ಶುರುವಾದಾಗ ಇದು 10 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆ ಇದೆ ಅದರಂತೆ ದರ ಏರಿಕೆ ಮಾಡಿದಲ್ಲಿ ಜನರ ಮೆಟ್ರೋ ಬಳಕೆ ಕಡಿಮೆಯಾಗಬಹುದು. ಅದರಲ್ಲೂ ಹೆಚ್ಚಿನ ಪಾರ್ಕಿಂಗ್ ಶುಲ್ಕ ಹಾಗೂ ಮೆಟ್ರೋ ನಿಲ್ದಾಣಗಳಿಂದ ಮನೆ, ಕಚೇರಿಗಳಿಗೆ ಇರುವ ಅಂತರ ಹಾಗೂ ಸಾರಿಗೆ ಸಮಸ್ಯೆಗಳ ಕಾರಣದಿಂದ ಜನ ಮೆಟ್ರೋ ಪ್ರಯಾಣವನ್ನು ಕಡಿಮೆ ಮಾಡಲುಬಹುದು.