ಬೆಂಗಳೂರು, ನ.29- ತಮ್ಮ ಸ್ಪಷ್ಟ ನಿಲುವು ಹಾಗೂ ಧೋರಣೆ ಮೂಲಕ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ಪ್ರಮುಖರಿಗೆ ಬಿಸಿ ಮುಟ್ಟಿಸುತ್ತುರುವ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಪತ್ರ ಬರೆಯುವ ಮೂಲಕ ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಡೆದಿರುವ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದುಬಸಚಿವ ಕೃಷ್ಣಬೈರೇಗೌಡ ಅವರ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ, ಅದು ತನಿಖೆಯಾಗಬೇಕು, ಆರೋಪ ಕುರಿತು ಸ್ಪಷ್ಟನೆ ಸಿಗುವವರೆಗೂ ತಾವು ಸದನಕ್ಕೆ ಬರುವುದಿಲ್ಲ, ಆರೋಪ ಸಾಬೀತಾದರೆ ರಾಜಿನಾಮೆ ನೀಡಲು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಪತ್ರ ಸರ್ಕಾರದ ಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತಾವು ಹಿರಿಯ ಶಾಸಕ ಬಿ.ಆರ್. ಪಾಟೀಲ್ ಕುರಿತಾಗಿ ಏನೂ ಹೇಳಿಲ್ಲ.ತಪ್ಪು ಗ್ರಹಿಕೆಯಿಂದ ಅವರು ಇಂತಹ ಪತ್ರ ಬರೆದಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಈಗಾಗಲೇ ತಾವು
ಶಾಸಕ ಬಿ.ಆರ್.ಪಾಟೀಲ್ ಅವರ ಜೊತೆ ತಾವು ದೂರವಾಣಿಯಲ್ಲಿ ಮಾತನಾಡಿದ್ದು, ಮುಖತಃ ಭೇಟಿ ಮಾಡುವಂತೆಯೂ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಸಚಿವ ಕೃಷ್ಣಬೈರೇಗೌಡ ಹಾಗೂ ಪ್ರಿಯಾಂಕ ಖರ್ಗೆ ವಿರುದ್ಧ ಬಿ.ಆರ್. ಪಾಟೀಲ್ ತಮಗೆ ಪತ್ರ ಬರೆದಿದ್ದಾರೆ. ಅವರ ಜತೆ ನಿನ್ನೆ ಮಾತನಾಡಲು ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆ ಮಾತನಾಡಿದ್ದೇನೆ. ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿದ್ದೇನೆ. ಅವರು ಬಂದ ನಂತರ ಅವರ ಜತೆ ಮಾತನಾಡಿ ಎಲ್ಲವನ್ನೂ ಬಗೆಹರಿಸುತ್ತೇನೆ.
ನಿಲುವು ಅಚಲ:
ಮತ್ತೊಂದೆಡೆ,ಮುಖ್ಯಮಂತ್ರಿಗಳಿಗೆ ತಾವು ಬರೆದಿರುವ ಪತ್ರದ ಬಗ್ಗೆ ತಮ್ಮ ನಿಲುವು ಪುನರುಚ್ಚರಿಸಿದ ಶಾಸಕ ಬಿ.ಆರ್. ಪಾಟೀಲ್, ಸಚಿವ ಕೃಷ್ಣಬೈರೇಗೌಡ ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ತನಿಖೆಯಾಗಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ತಮ್ಮ ವಿರುದ್ಧದ ಆರೋಪದ ಬಗ್ಗೆ ಸಮಗ್ರ ತನಿಖೆಯಾಗದ ಹೊರತು ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.
ಇಷ್ಟು ದಿನ ಎಲ್ಲ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದಾಯಿತು ಇನ್ನು ಮುಂದೆ ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಿಲ್ಲ ಎಂದು ಅವರು ತಿಳಿಸಿದರು.
ತಾವು ಬರೆದಿರುವ ಪತ್ರದ ಅಂಶಗಳ ಕುರಿತು ಚರ್ಚಿಸಲು ಬರುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆಹ್ವಾನಿಸಿದ್ದಾರೆ.ಆ ಸಭೆಗೆ ಹೋಗಿ ತಮ್ಮ ನಿಲುವು ಸ್ಪಷ್ಟವಾಗಿ ತಿಳಿಸುತ್ತೇನೆ. ಕಳಂಕ ಹೊತ್ತುಕೊಂಡು ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.