ಕಾಂಗ್ರೆಸ್ ವಕ್ತಾರ ಹಾಗು ರಾಜ್ಯ ಸರ್ಕಾರದ ಮಾಜಿ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ರಾಜ್ಯಸಭೆ ಅಥವ ವಿಧಾನಪರಿಷತ್ ಗೆ ಆಯ್ಕೆಯ ನಿರೀಕ್ಷೆಯಲ್ಲಿದ್ದ ಅವರು ಇದಕ್ಕಾಗಿ ಪ್ರಯತ್ನ ನಡೆಸಿದ್ದರು.ಆದರೆ, ಹೈಕಮಾಂಡ್ ಇದಕ್ಕೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಪಕ್ಷ ತೊರೆದಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಅವರು ಆರಂಭದಲ್ಲಿ ನೀವು ನನಗೆ ಒದಗಿಸಿದ ಹಲವಾರು ಅವಕಾಶಗಳಿಗಾಗಿ ನಾನು ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದಿಂದ ರಾಷ್ಟ್ರದ ಎಲ್ಲಾ ಭಾಗಗಳಲ್ಲಿಯೂ ನಾನು ಪರಿಚಿತ ಮುಖವೆಂದು ಗುರುತಿಸಲ್ಪಟ್ಟಿದ್ದೇನೆ. ಮತ್ತೊಮ್ಮೆ ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ಸಂಪುಟ ದರ್ಜೆಯ ಸ್ಥಾನದೊಂದಿಗೆ ಕೆಲಸ ಮಾಡಿದ್ದೇನೆ ಎಂದು ಸ್ಮರಿಸಿದ್ದಾರೆ.
ನಾನು ಕಾಂಗ್ರೆಸ್ ಪರವಾಗಿ ಕನ್ನಡ, ಹಿಂದಿ, ಇಂಗ್ಲಿಷ್ ಚಾನೆಲ್‍ಗಳಲ್ಲಿ ಚರ್ಚೆಯಲ್ಲಿ ಭಾಗವಹಿಸಿ, ಪಕ್ಷವನ್ನು ಸಮರ್ಥಿಸಿ ಕೊಂಡಿದ್ದೇನೆ. 2013ರಿಂದ ಈವರೆಗೂ ಸುಮಾರು ಒಂದು ದಶಕದ ಕಾಲ ಸಾಕಷ್ಟು ಪೂರ್ವ ತಯಾರಿಗಳೊಂದಿಗೆ 6497 ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಪಕ್ಷ ಕಾಲ-ಕಾಲಕ್ಕೆ ವಹಿಸಿದ್ದ ಜವಾಬ್ದಾರಿಗಳನ್ನು ನಿಭಾಯಿಸಿದ ಸಮಾಧಾನವೂ ನನಗಿದೆ. 2014 ಮತ್ತು 2019ರ ಸೋಲುಗಳ ಕೆಟ್ಟ ಪರಿಸ್ಥಿತಿಯಲ್ಲೂ ನಿರುತ್ಸಾಹಗೊಳ್ಳದೆ ತನ್ನ ಶಕ್ತಿ ಮೀರಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಾನು ಭಾವನಾತ್ಮಕ ಸಂಬಂಧದ ಕೊರತೆಯನ್ನು ಅನುಭವಿಸುತ್ತಿದ್ದೇನೆ. ನನ್ನ ಪ್ರಯತ್ನಗಳು ನಿರಾಸಕ್ತಿ ಮತ್ತು ನಿಷ್ಪ್ರಯೋಜಕವಾಗಿದೆ. ಹಾಗಾಗಿ ರಾಜಕೀಯ ದಿಕ್ಕನ್ನು ಬದಲಿಸಬೇಕಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು 1997ರಿಂದ ಪಕ್ಷದೊಂದಿಗಿನ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದಿದ್ದಾರೆ.
Previous Articleಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ
Next Article ರೂಪಾ ಮೌದ್ಗೀಲ್ ವಿರುದ್ಧ ದೂರು..