ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರ ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಕ್ಷೇತ್ರವಾಗಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ಪುತ್ರ.
ಸತತ ಮೂರು ಅವರಿಗೆ ಈ ಕ್ಷೇತ್ರದಿಂದ ಸಂಸದರಾಗಿ ಕೆಲಸ ಮಾಡಿರುವ ರಾಘವೇಂದ್ರ 4ನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ಇವರಿಗೆ ಎದುರಾಳಿಯಾಗಿ ಎರಡನೇ ಬಾರಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಅವರ ಸೋದರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಹಾಗೆಯೇ ಕಾಂಗ್ರೆಸ್ ಹುರಿಯಾಳು ಗೀತಾ ಶಿವರಾಜ್ ಕುಮಾರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಕ್ಕ. ಈ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಸ್ಪರ್ಧೆಯಿಂದಾಗಿ ದೇಶದ ಗಮನ ಸೆಳೆದಿರುವ ಈ ಕ್ಷೇತ್ರದಲ್ಲಿ ಹಲವಾರು ಪ್ರಮುಖ ವಿಷಯಗಳು Electionಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲು ತೊಡಗಿವೆ.
ಕ್ಷೇತ್ರದ ಇತಿಹಾಸ ಗಮನಿಸಿದಾಗಕರ್ನಾಟಕದ ರಾಜಕೀಯದಲ್ಲಿ ಬಂಗಾರಪ್ಪ ಮತ್ತು ಯಡಿಯೂರಪ್ಪ ಇಬ್ಬರೂ ಬಗರ್ ಹುಕುಂ ಜಮೀನು, ಕೃಷಿ ಕೂಲಿ ಕಾರ್ಮಿಕರು, ಶರಾವತಿ ನದಿ ತೆರವು ಹಾಗೂ ಜಿಲ್ಲೆಯ ಒಣಪ್ರದೇಶದಳಿಗೆ ನೀರಾವರಿಯಂತಹ ಜನರ ಸಮಸ್ಯೆಗಳಿಗಾಗಿ ಹೋರಾಡಿ ರಾಜ್ಯ ರಾಜಕಾರಣಕ್ಕೆ ಬಂದವರು. ಇಬ್ಬರೂ ಜಿಲ್ಲೆಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ಈಗ ಎರಡು ಕುಟುಂಬಗಳ ಎರಡನೇ ತಲೆಮಾರಿನವರು ಮುಖಾಮುಖಿಯಾಗುತ್ತಿರುವುದು ಕುತೂಹಲ ಮೂಡಿಸಿದೆ’
ರಾಘವೇಂದ್ರ ಅವರು 2009 ರಿಂದ ಸ್ಪರ್ಧಿಸಿದ ಎಲ್ಲಾ ಮೂರು ಸಂಸತ್ ಚುನಾವಣೆಗಳಲ್ಲಿ ಸತತವಾಗಿ ಗೆದ್ದಿದ್ದಾರೆ. ಅವರು 2018 ರ ಉಪಚುನಾವಣೆ ಹಾಗೂ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರನ್ನು ಎರಡು ಬಾರಿ ಸೋಲಿಸಿದರು. 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೀತಾ ಅವರನ್ನು ಯಡಿಯೂರಪ್ಪ ಸೋಲಿಸಿದ್ದರು.
ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಅಂದರೆ ಶಿವಮೊಗ್ಗ ನಗರ, ತೀರ್ಥಹಳ್ಳಿ, ಶಿಕಾರಿಪುರ, ಬೈಂದೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಶಿವಮೊಗ್ಗ ಗ್ರಾಮೀಣದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಭದ್ರಾವತಿ, ಸಾಗರ ಮತ್ತು ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.
ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ 17,29,901. ಪುರುಷರು 8,52,107. ಮಹಿಳೆಯರು 8,77,761, ತೃತೀಯ ಲಿಂಗಿಗಳು 33.
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಪರವಾದ ಚರ್ಚೆಗಿಂತ ಕುಟುಂಬಗಳ ನಡುವಿನ ಪ್ರತಿಷ್ಠೆ ಮತ್ತು ಜಿದ್ದಾಜಿದ್ದಿಯ ವಿಷಯವೇ ಪ್ರಮುಖವಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಈ ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಜಿಲ್ಲೆಯ ಇಬ್ಬರು ಪ್ರಭಾವಿ ರಾಜಕಾರಣಿಗಳಾದ ಬಂಗಾರಪ್ಪ ಮತ್ತು ಯಡಿಯೂರಪ್ಪ ಅವರು ದೂರ ದೃಷ್ಟಿ ಹೊಂದಿದ ನಾಯಕರಾಗಿದ್ದು ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಿದ್ದಾರೆ.
ಹೀಗಾಗಿ ಕೆಲವು ಜ್ವಲಂತ ಸಮಸ್ಯೆಗಳ ಜೊತೆಗೆ ಕೌಟುಂಬಿಕ ರಾಜಕಾರಣ ಮತ್ತು ಜಾತಿ ರಾಜಕಾರಣ ಇಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಸಾಕಷ್ಟು ಲೆಕ್ಕಾಚಾರ ಮಾಡಿ ಮಾಜಿ ಶಾಸಕ ಬಿಜೆಪಿ ಮುಖಂಡ ಸುಕುಮಾರಶೆಟ್ಟಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಸುಕುಮಾರ ಶೆಟ್ಟಿ ಅವರು ಪ್ರತಿನಿಧಿಸುತ್ತಿರುವ ಬೈಂದೂರು ಕ್ಷೇತ್ರ ಉಡುಪಿ ಜಿಲ್ಲೆಯಲ್ಲಿದ್ದರೂ ಅದು
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಈಡಿಗ ಸಮುದಾಯದ ಮತಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿವೆ ಇಲ್ಲಿ ಬಿಜೆಪಿಯ ಗುರುರಾಜ ಗಂಟಿಹೊಳಿ ಶಾಸಕರಾಗಿದ್ದರೂ ಕೂಡಾ, ಇತ್ತೀಚಿನವರೆಗೆ ಬಿಜೆಪಿಯಲ್ಲಿದ್ದ ಸುಕುಮಾರ್ ಶೆಟ್ಟಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.
ಈಗ ಇಬ್ಬರು ಕ್ಷೇತ್ರದ ಪ್ರಬಾವೀ ನಾಯಕರು (ಸುಕುಮಾರ್ ಶೆಟ್ಟಿ, ಗೋಪಾಲ ಪೂಜಾರಿ) ಕಾಂಗ್ರೆಸ್ ಗೆಲುವಿಗೆ ಠೊಂಕ ಕಟ್ಟಿ ನಿಂತಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ ಕೂಡಾ, ಕಾಂಗ್ರೆಸ್ಸಿಗೆ ಇಲ್ಲಿಂದ ಹೆಚ್ಚು ಮತ ಚಲಾವಣೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಸಕ ಗುರುರಾಜ್ ಗಂಟಿಹೊಳಿ ಮೇಲಿದೆ. ಇದಕ್ಕಿಂತಲೂ ಭಿನ್ನಮತ ಎದುರಿಸುತ್ತಿರುವ ಕ್ಷೇತ್ರವೆಂದರೆ ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮೀಣ.
ಬಿಜೆಪಿ ಮತ್ತು ಸಂಘ ಪರಿವಾರದ ಪ್ರಭಾವಿ ನಾಯಕ ಕೆಎಸ್ ಈಶ್ವರಪ್ಪ ಅವರು ಇದೀಗ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಈಶ್ವರಪ್ಪ ಘೋಷಿಸಿರುವುದು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚಿನ ಪ್ರಭಾವ ಹೊಂದಿದೆ ಎಂದು ಗೊತ್ತಾಗುತ್ತದೆಯಾದರೂ, ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ನಾಮ ಬಲ ಹಾಗೂ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರ ಸಂಘಟನಾಚಾರ್ಯವನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ಸಿನ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಈ ಬಾರಿ ಗೆಲುವಿನ ದಡ ಸೇರುವ ವಿಶ್ವಾಸದಲ್ಲಿದ್ದಾರೆ.
ಈಡಿಗ ಕುರುಬ ದಲಿತ ಅಲ್ಪಸಂಖ್ಯಾತ ಹಾಗೂ ಇತರೆ ಹಿಂದುಳಿದ ಮತಗಳು ತಮ್ಮನ್ನು ಬೆಂಬಲಿಸಲಿವೆ ಎಂದು ಗೀತಾ ಪ್ರಬಲವಾಗಿ ನಂಬಿದ್ದಾರೆ. ಅದೇ ರೀತಿಯಲ್ಲಿ ಲಿಂಗಾಯತ ಬ್ರಾಹ್ಮಣ ಒಕ್ಕಲಿಗ ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳು ತಮ್ಮನ್ನು ಬೆಂಬಲಿಸಲಿವೆ ಪ್ರಧಾನಿ ನರೇಂದ್ರ ಮೋದಿ ಪರವಾಗಿ ತಮ್ಮನ್ನು ಸುಲಭವಾಗಿ ಗೆಲುವಿನ ದಡವನ್ನು ದಾಟಿಸಲಿದೆ ಎಂದು ಹಾಲಿ ಸಂಸದ ರಾಘವೇಂದ್ರ ವಿಶ್ವಾಸ ಹೊಂದಿದ್ದಾರೆ ಆದರೆ ಕ್ಷೇತ್ರದ ಮತದಾರ ಯಾರ ಕಡೆ ಒಲಿಯಲಿದ್ದಾನೆ ಎಂಬುದನ್ನು ನೋಡಬೇಕಾದರೆ ಮತಗಳ ಎಣಿಕೆಯವರೆಗೆ ಕಾಯಬೇಕು.