ಶಿವಮೊಗ್ಗ
ರಾಜ್ಯ ರಾಜಕಾರಣದಲ್ಲಿ ನನ್ನನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ರಾಜ್ಯದಲ್ಲಿ ಮತ್ತೆ BJP ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇನೆ ಎಂದು ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೀಗ 80 ವರ್ಷಗಳು ತುಂಬುತ್ತಿವೆ. ಹೀಗಾಗಿ Electionಗೆ ಸ್ಪರ್ಧಿಸುವುದಿಲ್ಲ. ಈ ಚುನಾವಣೆ ಸೇರಿ ಇನ್ನೂ ಎರಡು ಅವಧಿಗಳವರೆಗೆ ಸಕ್ರಿಯ ರಾಜಕಾರಣದಲ್ಲಿಇರುತ್ತೇನೆ. ನಿವೃತ್ತಿಯ ಮಾತೇ ಇಲ್ಲ’ ಎಂದು ಸ್ಪಷ್ಟಪಡಿಸಿದರು. ‘ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ಎರಡು ದಿನ ರಾಜ್ಯ ಪ್ರವಾಸ ಕೈಗೊಂಡು ಯಾವ ಯಾವ ಕ್ಷೇತ್ರದಲ್ಲಿ ಗೆಲ್ಲಬೇಕು, ಹೇಗೆಲ್ಲಾ ಕೆಲಸ ಮಾಡಬೇಕೆಂದು ಸವಿಸ್ತಾರವಾಗಿ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದು, 140ರಿಂದ 150 ಸ್ಥಾನಗಳಲ್ಲಿ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ತಯಾರಿ ಮಾಡಲಾಗುತ್ತಿದೆ’ ಎಂದರು.
‘ಕೇಂದ್ರದ ನಾಯಕರು ವಿಧಾನಸಭೆ ಚುನಾವಣೆಗೆ ಸಜ್ಜಾಗುವ ಜೊತೆಗೆ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದಾರೆ. ನನಗೆ ಹೆಚ್ಚಿನ ಸಮಯ ನೀಡಿ ಹಳ್ಳಿಗೆ ಪ್ರವಾಸ ಮಾಡಿ ಎಂದು ಸಲಹೆ ನೀಡಿದ್ದಾರೆ. ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಕಾರ್ಯಕರ್ತರೊಂದಿಗೆ ರಾಜ್ಯ ಪ್ರವಾಸ ಆರಂಭವಾಗಲಿದೆ. Amit Shah ನೀಡಿರುವ ಗೆಲ್ಲುವ ಟಾರ್ಗೆಟ್ ಅನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಮತ್ತೆ BJP ಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ’ ಎಂದು ಹೇಳಿದರು.
‘CM ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆಯೂ ಎಲ್ಲೇ ಹೋದರೂ ಯಡಿಯೂರಪ್ಪ ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ಅಧಿಕಾರ, ಸ್ಥಾನಮಾನ ಇಲ್ಲದೆಯೂ ಪಕ್ಷ ಕಟ್ಟಬಹುದು ಎಂಬ ಸವಾಲು ನನ್ನ ಮುಂದಿದೆ. ಆ ಸವಾಲನ್ನು ಸ್ವೀಕರಿಸಿ ಜನರ ಬಳಿ ಹೋಗುತ್ತಿದ್ದೇನೆ’ ಎಂದು ತಿಳಿಸಿದರು.
‘ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭ ಫೆ.27ರಂದು ನಿಶ್ಚಿತವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುವರು. ಅದೇ ದಿನ ವಿಮಾನ ನಿಲ್ದಾಣಕ್ಕೆ ನಾಡುಕಂಡ ಶ್ರೇಷ್ಠ ಕವಿ, ಜ್ಞಾನಪೀಠ ಪುರಸ್ಕೃತ ಕುವೆಂಪು (Kuvempu) ಅವರ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ಹೇಳಿದರು.
‘ಕುವೆಂಪು ಅವರು ವಿಶ್ವಮಾನ್ಯ ಸಂದೇಶವನ್ನು ಜಗತ್ತಿಗೆ ಸಾರಿದ್ದು, ಪ್ರಧಾನಿ ಮೋದಿ ಅವರು ಅದೇ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಕ್ಕೆ ಮೋದಿ ಅವರಿಂದಲೇ ಕುವೆಂಪು ಹೆಸರು ನಾಮಕರಣ ಮಾಡಿಸಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದ್ದು, ನಾಡಿನ ಸಮಸ್ತ ಜನರು ಈ ನಿರ್ಧಾರವನ್ನು ಸ್ವಾಗತಿಸುವ ವಿಶ್ವಾಸವಿದೆ’ ಎಂದರು.