ಶಿವಮೊಗ್ಗ/ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪುತ್ರ ವಿಜಯೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಈ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ವಿಜಯೇಂದ್ರ ಅವರ ಸ್ಪರ್ಧೆಯ ಬಗ್ಗೆ ಇದ್ದ ಊಹಾಪೋಹಗಳಿಗೆ ತಾತ್ಕಾಲಿಕ ತೆರೆ ಬಿದ್ದಿದೆ.
ಬಿಜೆಪಿ ಹೈಕಮಾಂಡ್ ಈ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ.
ಆದರೆ, ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ನನ್ನ ಬದಲಾಗಿ ಪುತ್ರ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದು ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯ ಮುನ್ಸೂಚನೆ ಎಂದೇ ಹೇಳಲಾಗುತ್ತಿದೆ. ಸಕ್ರಿಯ ರಾಜಕಾರಣದಿಂದ ಯಡಿಯೂರಪ್ಪ ದೂರ ಸರಿದರೆ ಅದು ಬಿಜೆಪಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಯಡಿಯೂರಪ್ಪ ವೀರಶೈವ ಸಮುದಾಯದ ಹಿರಿಯ ನಾಯಕ. ಅವರನ್ನು ಸರಿಗಟ್ಟುವ ನಾಯಕ ಸದ್ಯ ಯಾರೂ ಇಲ್ಲ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದವರಲ್ಲಿ ಯಡಿಯೂರಪ್ಪ ಕೂಡ ಪ್ರಮುಖರು. ಯಡಿಯೂರಪ್ಪ ದೂರ ಸರಿದರೆ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದರೆ ಅದು ನೇರವಾಗಿ ಬಿಜೆಪಿ ಮತ ಬ್ಯಾಂಕ್ ಗಳ ಮೇಲೆ ಪ್ರಭಾವ ಬೀರಲಿದೆ.
ಚುನಾವಣೆಗೆ 9 ತಿಂಗಳು ಬಾಕಿ ಇರುವಾಗಲೇ ಯಡಿಯೂರಪ್ಪ ನೀಡಿರುವ ಹೇಳಿಕೆ ಇದೀಗ ಭಾರೀ ಸಂಚಲನ ಮೂಡಿಸಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ,ವೈ. ವಿಜಯೇಂದ್ರ ತಂದೆಯ ನಿರ್ಧಾರ ಹಾಗೂ ಪಕ್ಷದ ಸೂಚನೆಗಳಿಗೆ ನಾನು ಎಂದಿಗೂ ಬದ್ಧನಾಗಿರುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಂದೆ ಸ್ಫರ್ಧಿಸದೇ ಇದ್ದರೂ ಅವರು ಯಾವುದೇ ಅಧಿಕಾರದಲ್ಲಿ ಇರದೇ ಇದ್ದರೂ ಸಹ ಅವರು ಪಕ್ಷದ ಸಂಘಟನೆ ಮಾಡಲಿದ್ದಾರೆ. ಅವರಿಗೆ ಶಕ್ತಿ ಇರುವವರೆಗೂ ರಾಜ್ಯ ಪ್ರವಾಸ ಕೈಗೊಂಡು ಪಕ್ಷ ಬಲವರ್ಧನೆ ಮಾಡಲಿದ್ದಾರೆ. ನಮ್ಮ ತಂದೆ ಹಿಸ್ಟರಿಯಲ್ಲಿ ರಾಜಕೀಯ ನಿವೃತ್ತಿ ಎಂಬ ಮಾತೇ ಉದ್ಭವಿಸುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ವಿಜಯೇಂದ್ರಗೆ ಶಿಕಾರಿಪುರ ಬಿಟ್ಟುಕೊಟ್ಟ ಬಿಎಸ್‌ವೈ: ರಾಜಕೀಯದಿಂದ ನಿವೃತ್ತಿಯಾಗ್ತಾರಾ ಮಾಜಿ ಸಿಎಂ?
Previous Articleಭಗವತಿ ನೀರಾವರಿ ಯೋಜನೆಗೆ ಅಸ್ತು..
Next Article ಬಾಳೆ ಬೆಳೆ ಕಡಿದ ವೈಮನಸ್ಸು :ತುಮಕೂರಿನಲ್ಲಿ ಅವಮಾನವೀಯ ಘಟನೆ