ಬೆಂಗಳೂರು,ಜೂ.28- ಅತ್ತಿಬೆಲೆಯ ಕ್ರಷರ್ ಉದ್ಯಮಿಯಿಂದ 5 ಲಕ್ಷ ರೂ ಸುಲಿಗೆ ಮಾಡಿದ ಗಂಭೀರ ಪ್ರಕರಣವನ್ನು ತನಿಖೆ ನಡೆಸಿರುವ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಅವರು ಐಪಿಎಸ್ ಅಧಿಕಾರಿ ಮತ್ತು ಡಿವೈಎಸ್ಪಿ ಅವರ ವಿರುದ್ಧ ಯಾವುದೇ ರೀತಿಯಲ್ಲಿಯೂ ತನಿಖೆ ನಡೆಸದೆಯೇ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಅಶ್ವ ಲಾ ಅಸೋಸಿಯೇಟ್ಸ್ ರಾಜ್ಯದ ಪೊಲೀಸ್ ಮಹಾನಿರ್ದೇಶಕರ ಕಚೇರಿ ಮೆಟ್ಟಿಲೇರಿದೆ.
ದೂರುದಾರ ಪರ ವಕೀಲರಾದ ಅಶ್ವ ಲಾ ಅಸೋಸಿಯೇಟ್ಸ್ ನ ವಕೀಲ ನಟರಾಜ ಶರ್ಮ ಅವರು ಜೂ. 22ರಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ಪ್ರವೀಣ್ ಸೂದ್ ಅವರು ದೂರು ನೀಡಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಕೆಳಹಂತದ ಸಿಪಿಐ, ಎಎಸ್ ಐಗಳಿಬ್ಬರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ ವಕೀಲ ನಟರಾಜ್ ಶರ್ಮ ಅವರು ಪೊಲೀಸ್ ಮಹಾನಿರ್ದೇಶಕರ ಕಚೇರಿ ಮೆಟ್ಟಿಲೇರಿರುವುದು ಪ್ರಕರಣವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
‘ದೂರುದಾರ ಮತ್ತು ತಮ್ಮ ಕಕ್ಷಿದಾರ ಮಂಜುನಾಥ್ ಅವರಿಂದ ಲಂಚವನ್ನು ಪಡೆದಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಅವರು 5 ಲಕ್ಷ ರು.ಗಳನ್ನು ಪಿಐ ಶ್ರೀನಿವಾಸ್ ಎಂಬುವರ ಮೂಲಕ ಮತ್ತು ಡಿವೈಎಸ್ಪಿ ಮಹಾದೇವಯ್ಯ ಅವರೂ 2.50 ಲಕ್ಷ ಲಂಚವನ್ನು ತಮ್ಮ ಸ್ನೇಹಿತ ಕಾಶಿ ಎಂಬುವರ ಮೂಲಕ ಪಡೆದಿದ್ದಾರೆ. ತನಿಖೆ ನಡೆಸಿದ್ದ ಐಜಿಪಿ ಚಂದ್ರಶೇಖರ್ ಅವರು ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಹಾಗೂ ಡಿವೈಎಸ್ಪಿ ಮಹದೇವಯ್ಯ ಅವರ ವಿರುದ್ಧದ ಆರೋಪಗಳ ಕುರಿತು ಯಾವುದೇ ರೀತಿಯ ತನಿಖೆಯನ್ನು ಮಾಡದೇ ಇರುವುದು ಅವರು ನೀಡಿರುವ ವರದಿಯಿಂದ ಎದ್ದು ಕಾಣುತ್ತದೆ. ಈ ಐದೂ ಜನರ ಮೇಲೆ ಇರುವ ಆರೋಪಗಳು ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಒಳಪಡಿಸಬೇಕಾಗಿರುವುದರಿಂದ ತನಿಖೆಗೆ ಕೂಡಲೇ ಒಳಪಡಿಸಲು ಆದೇಶಿಸಬೇಕು,’ ಎಂದು ನಟರಾಜ ಶರ್ಮ ಅವರು ಮನವಿಯಲ್ಲಿ ಕೋರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ (ಡಿಸಿಐಬಿ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ ಶ್ರೀನಿವಾಸ್ (ಹಾಲಿ ವಿಜಯಪುರ ವೃತ್ತ), ಎಎಸ್ಐ ಶುಭ, ಕೆ ಜಿ ಅನಿತಾ ಅವರು ಅಮಾನತುಗೊಳಿಸಲಾಗಿತ್ತು. ಬೆಂಗಳೂರು ಜಿಲ್ಲೆ ಪೊಲೀಸ್ ಅಧೀಕ್ಷಕರು ವಿಚಾರಣೆ ನಡೆಸಿ ವರದಿಯನ್ನು ಈ ಕಚೇರಿಗೆ ಸಲ್ಲಿಸಿದ್ದ ವರದಿ ಅಧರಿಸಿ ಈ ಕ್ರಮವನ್ನುಕೈಗೊಳ್ಳಲಾಗಿತ್ತು. ಈ ವಿಚಾರಣಾ ವರದಿಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆಂದು ತಿಳಿಸಿದ್ದಾರೆ,’ ಎಂಬ ಅಂಶವನ್ನು ಅಮಾನತು ಆದೇಶದಲ್ಲಿ ಪ್ರಸ್ತಾಪಿಸಲಾಗಿತ್ತು.