ಬೆಂಗಳೂರು,ಜ.11:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಆಕ್ಷೇಪಾರ್ಥ ಪದ ಬಳಕೆ ವಿವಾದದಲ್ಲಿ ಸಿಲುಕಿರುವ ಬಿಜೆಪಿ ನಾಯಕ ಸಿ.ಟಿ. ರವಿ ಇದೀಗ ಬೆದರಿಕೆ ಕರೆಗಳನ್ನು ಎದುರಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ರವಿ ಅವರ ಮೊಬೈಲ್ ಗೆ ಅನಾಮಧೇಯ ನಂಬರ್ ಗಳ ಮೂಲಕ ಬೆದರಿಕೆ ಕರೆಗಳು ಬರುತ್ತಿವೆ.
ಈ ನಡುವೆ ಅವರ ಚಿಕ್ಕಮಗಳೂರು ನಿವಾಸಕ್ಕೆ ಬೆದರಿಕೆ ಪತ್ರ ಒಂದು ಬಂದಿದೆ. ಇದರಲ್ಲಿ ಅವಾಚ್ಯ ಶಬ್ದ ಬಳಸಿರುವ ಸಿಟಿ ರವಿ ಅವರು ತಕ್ಷಣವೇ ಬೆಳಗಾವಿಗೆ ಬಂದು ಮಂತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಲು ಹಿಡಿದು ಕ್ಷಮೆ ಕೋಬೇಕು ಇಲ್ಲವಾದರೆ ನಿಮ್ಮನ್ನು ಹಾಗೂ ನಿಮ್ಮ ಪುತ್ರ ಸೂರ್ಯನನ್ನು ಮುಗಿಸಿಬಿಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಮಾದರಿಯ ರಾಜಕಾರಣ ಮಾಡುತ್ತಿರುವ ನಮ್ಮ ನಾಯಕಿಯ ಬಗ್ಗೆ ನೀವು ಬಳಸುವ ಪದ ಅತ್ಯಂತ ಅಕ್ಷಮ್ಯ. ಇದಕ್ಕಾಗಿ ಒಂದು ಬಾರಿ ಕ್ಷಮೆ ಕೇಳುವ ಅವಕಾಶ ನೀಡಲಾಗುತ್ತಿದೆ ತಪ್ಪಿದಲ್ಲಿ ನಿಮ್ಮನ್ನು ಹಾಗೂ ನಿಮ್ಮ ಪುತ್ರನನ್ನು ಇಲ್ಲದಂತೆ ಮಾಡುತ್ತೇವೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ತಮಗೆ ಬರುತ್ತಿದ್ದ ಬೆದರಿಕೆ ಕರೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದ ಸಿಟಿ ರವಿ ಇದೀಗ ತಮ್ಮ ಪುತ್ರನ ಬಗ್ಗೆ ಮಾತನಾಡಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೊಂಚ ಅಧೀರಗೊಂಡಿದ್ದಾರೆ. ಈ ಪತ್ರದ ಬಗ್ಗೆ ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರ ಜೊತೆ ಸಮಾಲೋಚನೆ ನಡೆಸಿದ್ದು, ಅವರ ಆ ಸೂಚನೆಯ ಮೇರೆಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಇದಾದ ನಂತರ ಸಿ.ಟಿ.ರವಿ ಅವರ ಆಪ್ತ ಸಹಾಯಕ ಚಿಕ್ಕಮಗಳೂರಿನ ಬಸವನಹಳ್ಳಿ ಠಾಣೆಗೆ ತೆರಳಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ
Previous ArticleSSLC, ಮತ್ತು PUC ಪರೀಕ್ಷೆ ವೇಳಾಪಟ್ಟಿ
Next Article ಡಿ.ಕೆ.ಶಿವಕುಮಾರ್ ಯಾಕೆ ಹೀಗೆ ಹೇಳಿದರು