ಬೆಂಗಳೂರು,ಫೆ.11-ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ 2 ಮತ್ತು 4ನೇ ಶನಿವಾರ ವಾಹನ ಸಂಚಾರಕ್ಕೆ ಅನುವು ನೀಡಿ ತೋಟಗಾರಿಕಾ ಇಲಾಖೆಯು ಆದೇಶ ನೀಡಿದ್ದು, ಪ್ರವಾಸಿಗರು ಹಾಗೂ ಆ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸಂತಸ ನೀಡಿದೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸುಗಮ ಸಂಚಾರಕ್ಕಾಗಿ ಕಬ್ಬನ್ ಪಾರ್ಕ್ ಆವರಣದೊಳಗೆ ಹೈಕೋರ್ಟ್‌ನಿಂದ ಸಿದ್ದಲಿಂಗಯ್ಯ ವೃತ್ತ ಮತ್ತು ಸಿದ್ದಲಿಂಗಯ್ಯ ವೃತ್ತದಿಂದ ಹೈಕೋರ್ಟ್ ಭಾಗದವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ಈ ಅವಕಾಶ ನೀಡಲಾಗಿದೆ.ಕಬ್ಬನ್ ಪಾರ್ಕ್ ಒಳಗೆ ಸಂಚಾರಕ್ಕೆ ಅವಕಾಶ ನೀಡುವುದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಲು ಸಹಾಯವಾಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಅನುಚೇತ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ವಾಹನ ಸಂಚಾರ ನಿಲುಗಡೆಗೆ ಕಬ್ಬನ್ ಪಾರ್ಕ್‌ನೊಳಗೆ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವಿದೆ ಎಂದು ಅನುಚೇತ್ ಹೇಳಿದ್ದಾರೆ.
ಕೆಲವು ವರ್ಷಗಳಿಂದ ಕಬ್ಬನ್ ಪಾರ್ಕ್‌ನೊಳಗೆ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಇತರ ಸಾರ್ವತ್ರಿಕ ರಜಾದಿನಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ನ ನೂರಕ್ಕೂ ಹೆಚ್ಚು ಸದಸ್ಯರು ಮತ್ತು ಕಬ್ಬನ್ ಪಾರ್ಕ್‌ಗೆ ನಿತ್ಯ ಭೇಟಿ ನೀಡುವವರು ಪಾರ್ಕ್‌ನೊಳಗೆ ಸಂಚಾರಕ್ಕೆ ಅವಕಾಶ ನೀಡುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹೀಗಾಗಿ 2023 ರ ಅಕ್ಟೋಬರ್ನಲ್ಲಿ ಪಾರ್ಕ್‌ನೊಳಗೆ ಸಂಚಾರಕ್ಕೆ ಅವಕಾಶ ನಿಷೇಧಿಸಲಾಗಿತ್ತು.
ಸಂರಕ್ಷಣಾ ಸಮಿತಿ ವಿರೋಧ:
ಪಾರ್ಕ್‌ನೊಳಗೆ ಸಂಚಾರಕ್ಕೆ ಅನುವು ಮಾಡಿಕೊಡುವ ಆದೇಶಕ್ಕೆ ಇತ್ತೀಚೆಗೆ ರಚನೆಯಾಗಿರುವ ಕಬ್ಬನ್ ಪಾರ್ಕ್ ಸಂರಕ್ಷಣಾ ಸಮಿತಿಯು ವಿರೋಧ ವ್ಯಕ್ತಪಡಿಸಿದೆ. ತೋಟಗಾರಿಕೆ ಇಲಾಖೆಯ ಉನ್ನತಾಧಿಕಾರಿಗಳು ಕಬ್ಬನ್ ಪಾರ್ಕ್‌ನ ನಿರ್ವಹಣೆ ಅಥವಾ ಪರಿಸರ ವ್ಯವಸ್ಥೆಯ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಮಿತಿ ದೂರಿದೆ.
ಎರಡನೇ ಮತ್ತು ನಾಲ್ಕನೇ ಶನಿವಾರದಂದು ಪಾರ್ಕ್‌ನೊಳಗೆ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವುದರಿಂದ ಕಬ್ಬನ್ ಪಾರ್ಕ್‌ಗೆ ಬರುವ 3,000, 5,000 ಮಂದಿಗೆ ತೊಂದರೆಯಾಗಲಿದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.