ಬೆಂಗಳೂರು, ಮಾ.19- ಮುಕ್ತ ಹಾಗೂ ಶಾಂತಿಯುತ Electionಗೆ ಕಾರ್ಯತಂತ್ರ ರೂಪಿಸುತ್ತಿರುವ ಚುನಾವಣೆ ಆಯೋಗ ನೀತಿ ಸಂಹಿತೆ ಜಾರಿಯಾದ 24 ಗಂಟೆಯಲ್ಲಿ ರಾಜ್ಯದಲ್ಲಿ 16.89 ಕೋಟಿ ರೂ ಮೌಲ್ಯದ ನಗದು, ಮದ್ಯ ಮತ್ತು ಆಭರಣಗಳನ್ನು ವಶಕ್ಕೆ ಪಡೆದಿದೆ.
ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲನೆಗೆ ಹಲವಾರು ಹೊಸ ಕ್ರಮಗಳನ್ನು ರೂಪಿಸಿರುವ ಆಯೋಗ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಬೂತ್ ಗಳ ಮೇಲೆ ವಿಶೇಷ ನಿಗಾ ವಹಿಸಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘನೆಯಡಿ ನಗದು ರೂಪದಲ್ಲಿ ಒಂದು ಕೋಟಿ 45.76 ಲಕ್ಷ ರೂ, ಜೊತೆಗೆ 15.37 ಕೋಟಿ ರೂ. ಮೌಲ್ಯದ ಮದ್ಯ, ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯೋಗ ತಿಳಿಸಿದೆ.
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಚೆಕ್ ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ದಾಖಲೆ ಇಲ್ಲದೇ ಭಾರೀ ಮೊತ್ತದ ಹಣ ಸಾಗಿಸುತ್ತಿದ್ದರೆ ವಶಕ್ಕೆ ಪಡೆದು ಕ್ರಮ ಕೈಗೊಳ್ಳುತ್ತಿದ್ದಾರೆ.
ಸಾಂಗ್ಲಿಗೆ ಹೋಗುತ್ತಿದ್ದ ಹಣ:
ಹೈದರಾಬಾದ್ ನಿಂದ ಹುಬ್ಬಳ್ಳಿಗೆ ಕಾರೊಂದರಲ್ಲಿ ಸಾಗಿಸುತ್ತಿದ್ದ 2 ಕೋಟಿ,93 ಲಕ್ಷದ 50, ಸಾವಿರ ನಗದನ್ನು ವಿಜಯಪುರ ಸಿಇಎನ್ ಕ್ರೈಂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಹಣ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುನೀಲ್ ಕುಮಾರ್ ನಂದೇಶ್ವರ ಮತ್ತು ಸಿಬ್ಬಂದಿ ಸಿಂದಗಿ ಬೈಪಾಸ್ ನಲ್ಲಿ
ಮಹಾರಾಷ್ಟ್ರ ನೋಂದಾಣಿ ಇರುವ ಎಂ.ಎಚ್.01 ಸಿಡಿ 7537 ಸಂಖ್ಯೆಯ ಟೊಯೋಟಾ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದರು.ಅದರಲ್ಲಿ ನಗದು ಪತ್ತೆಯಾಗಿದೆ.
ಈ ಹಣವನ್ನು ಕಾರಿನಲ್ಲಿ ಸಾಂಗ್ಲಿ ಯ ಬಾಲಾಜಿ ನಿಕ್ಕಂ ಮತ್ತು ಸಚಿನ್ ಮೋಹಿತೆ ಎಂಬುವವರು ಸಾಗಿಸುತ್ತಿದ್ದರು.ಮೊತ್ತದ ಬಗ್ಗೆ ಸೂಕ್ತ ದಾಖಲೆಯನ್ನು ಒದಗಿಸದ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.
ಮಂಡ್ಯದಲ್ಲಿ ಕೋಟಿ:
ಕಳೆದ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಂಗಬೋರನದೊಡ್ಡಿ ಬಳಿಯಲ್ಲಿ ಕಾರಿನಲ್ಲಿ ಅಕ್ರಮವಾಗಿ ಚೀಲದಲ್ಲಿ ಸಾಗಿಸುತ್ತಿದ್ದ 1 ಕೋಟಿ ನಗದು ಪತ್ತೆಯಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಡೆಗೆ ಹೋಗುತ್ತಿದ್ದ ಕಾರನ್ನು ಚುನಾವಣಾ ಚೆಕ್ ಪೋಸ್ಟ್ ಅಧಿಕಾರಿಗಳು, ಪೊಲೀಸರು ಕೊಂಗಬೋರನದೊಡ್ಡಿ ಬಳಿ ತಡೆದು ಪರಿಶೀಲಿಸಿದಾಗ ಅದರಲ್ಲಿ 99 ಲಕ್ಷದ 20 ಸಾವಿರ ಹಣ ಪತ್ತೆಯಾಗಿದೆ.
ಯಾವುದೇ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಹಣ ಹಾಗೂ ಕಾರು ವಶಕ್ಕೆ ಪಡೆಯಲಾಗಿದೆ.
ಗಿರೀಶ್ ಎಂಬವರ ಕಾರಿನಲ್ಲಿ ಈ ಹಣ ದೊರೆತಿದೆ. ಈ ಬಗ್ಗೆ ಗಿರೀಶ್ ಅವರನ್ನು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದ್ದು ಸೂಕ್ತ ಉತ್ತರ, ದಾಖಲೆ ನೀಡದ ಕಾರಣ ಹಣ ಸೀಜ್ ಮಾಡಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.