ಬೆಂಗಳೂರು,ಫೆ.14-
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ (Sri Guru Raghavendra Sahakara Bank) ನ ಹಗರಣವನ್ನು CBI ತನಿಖೆಗೆ ವಹಿಸಲು ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಶೀಘ್ರವೇ ಗೃಹ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (S T Somashekar Gowda) ತಿಳಿಸಿದ್ದಾರೆ.
ವಿಧಾನಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘COD, ಸಹಕಾರ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಹಗರಣವನ್ನು ತನಿಖೆ ನಡೆಸಿವೆ. ಈವರೆಗೂ 1290 ಕೋಟಿ ವಂಚನೆಯನ್ನು ಪತ್ತೆ ಹಚ್ಚಿವೆ. COD ತನಿಖೆ ಪ್ರಾಮಾಣಿಕವಾಗಿ ನಡೆಯುತ್ತಿದೆ. ಈ ಹಂತದಲ್ಲಿ CBI ಗೆ ಒಪ್ಪಿಸಿದರೆ ತನಿಖೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ತಡೆ ಹಿಡಿಯಲಾಗಿತ್ತು’ ಎಂದು ಹೇಳಿದರು.
ಮೂರು ವರ್ಷಗಳಿಂದ COD ಮತ್ತು ಸಹಕಾರ ಇಲಾಖೆ ತನಿಖೆ ನಡೆಸಿ ಏನೆಲ್ಲಾ ಅವ್ಯವಹಾರಗಳು ನಡೆದಿವೆ ಎಂಬ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಆ ಮಾಹಿತಿಯನ್ನು ಸರ್ಕಾರ ಪರಿಶೀಲನೆ ಮಾಡುತ್ತಿದೆ. ಮುಂದಿನ ಹಂತದಲ್ಲಿ CBI ತನಿಖೆಗೆ ನೀಡಲು ತಯಾರಾಗಿದ್ದೇವೆ. CBI ನವರು ಏನೆಲ್ಲಾ ದಾಖಲೆಗಳನ್ನು ಕೇಳಬಹುದು ಎಂಬ ನಿರೀಕ್ಷೆಯ ಮೇಲೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಿದ್ದೇವೆ ಎಂದರು.
ಇಷ್ಟೆಲ್ಲ ತನಿಖೆ ಮಾಡಿದರೂ ವಂಚನೆ ಯಾರು ಮಾಡಿದ್ದಾರೆ ಎಂದು ಕಂಡು ಹಿಡಿಯಲಾಗುತ್ತಿಲ್ಲ. ED ಯವರೂ ವಿಚಾರಣೆ ಮಾಡಿದ್ದಾರೆ. ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಗೃಹ ಇಲಾಖೆಗೆ ಎರಡು ಮೂರು ದಿನಗಳಲ್ಲಿ ಕಡತ ರವಾನೆಯಾಗಲಿದೆ. ನಂತರ CBI ತನಿಖೆಗೆ ಒಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.