ಬೆಂಗಳೂರು, ಸೆ. 16 – ರಾಜ್ಯದಲ್ಲಿ ಮಳೆ ಅಭಾವದಿಂದ ಬಹುತೇಕ ಬರಗಾಲ ಪೀಡಿತ ಪ್ರದೇಶ ಪೀಡಿತವಾಗಿದೆ.ಈ ಪ್ರದೇಶಗಳನ್ನು ಬರ ಪೀಡಿತ ಎಂದು ಘೋಷಿಸಿ ಅಗತ್ಯ ಪರಿಹಾರ ಕೈಗೊಳ್ಳಲು ಕೇಂದ್ರ ಸರ್ಕಾರದ ನಿಯಮಗಳು ಅಡ್ಡಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರಕಟಿಸಿರುವ ಬರ ನಿರ್ವಹಣೆ ಕೈಪಿಡಿ 2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದಾಗಿಯೇ ಬರಗಾಲ ಘೋಷಣೆ ವಿಳಂಬವಾಗಿದೆ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಹೇಳಿದ್ದಾರೆ.
ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಾನದಂಡಗಳಲ್ಲಿನ ಬದಲಾವಣೆ ಕೇವಲ ಕರ್ನಾಟಕ ರಾಜ್ಯದ ದೃಷ್ಟಿಯಿಂದ ಮಾತ್ರವೇ ಅಲ್ಲ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟವಾದ ಭಾರತ ಗಣರಾಜ್ಯದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿರುತ್ತದೆ.
ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕರ್ನಾಟಕವು ವೈವಿಧ್ಯಮಯವಾದ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ. ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯವಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಸಕ್ತ ಬರ ಘೋಷಣೆಯ ಮಾನದಂಡಗಳು ಹವಾಮಾನಶಾಸ್ತ್ರೀಯ, ಕೃಷಿ ಹಾಗೂ ಜಲಶಾಸ್ತ್ರೀಯ ಬರಗಳ ಸೂಚ್ಯಂಕಗಳನ್ನು ತನ್ನ ಮಾನದಂಡಗಳಲ್ಲಿ ಕ್ರೋಢೀಕರಿಸಿಕೊಂಡಿದೆ. ಆದರೆ, ಸದಾಕಾಲವೂ ಇದು ಅನ್ವಯಯೋಗ್ಯವೆಂದೇನೂ ಅಲ್ಲ. ಹವಾಮಾನ ಶಾಸ್ತ್ರೀಯ ಬರವನ್ನು ಪರಿಗಣಿಸಿಯೇ ನೋಡುವುದಾದರೆ, ಮುಂಗಾರಿನಲ್ಲಿ ಆರಂಭದಲ್ಲಿ ಮಳೆ ಕೊರತೆ ಇದ್ದದ್ದು ಆನಂತರ ಪ್ರಬಲ ಮಾರುತಗಳ ಪರಿಣಾಮ ಸುದಾರಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಇದು ಹೆಚ್ಚು ಘಟಿಸಿದೆ ಎಂದು ಹೇಳಿದ್ದಾರೆ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮಳೆ ಹೆಚ್ಚಾಗಿದೆ.
ಇಂತಹ ಸಂದರ್ಭದಲ್ಲಿ, ಮುಂಗಾರು ಆರಂಭದಲ್ಲಿ ಮಳೆ ಕೊರತೆಯ ಕಾರಣಕ್ಕೆ ಬಿತ್ತನೆ ಪ್ರಮಾಣ ಇಳಿಕೆಯಾಗಿರುತ್ತದೆ. ಪರಿಣಾಮ ಬೆಳೆಯಲ್ಲಿ ಕೊರತೆಯುಂಟಾಗಿ ಕೃಷಿ ಆಧರಿತ ಬರದ ಸನ್ನಿವೇಶ ಉದ್ಭವಿಸುತ್ತದೆ. ಅದರೆ, ಇದೇ ವೇಳೆ ಸುಧಾರಿಸಿದ ಮಳೆಯ ಮಾರುತಗಳಿಂದಾಗಿ ಹವಾಮಾನ ಮತ್ತು ಜಲಶಾಸ್ತ್ರೀಯ ಬರ ಕಾಣದೆ ಹೋಗಬಹುದು. ಈ ಸೂಕ್ಷ್ಮವನ್ನು ಬರ ಘೋಷಣೆಗೆ ಕಡ್ಡಾಯವಾಗಿರುವ ಮಾನದಂಡಗಳು ಒಳಗೊಳ್ಳಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ
ಭಾರತೀಯ ಹವಾಮಾನ ಇಲಾಖೆಯು ದೇಶಾದ್ಯಂತ ಶೇ.10 ಮಳೆಯ ಕೊರತೆಯನ್ನೂ ಸಹ ಬರದ ವರ್ಷ ಎಂದು ತೀರ್ಮಾನಿಸಿ ಘೋಷಿಸುತ್ತದೆ. ಆದರೆ, ಮಾನದಂಡಗಳ ಪ್ರಕಾರ ರಾಜ್ಯಗಳು ಬರ ಘೋಷಣೆಯನ್ನು ಮಾಡಬೇಕಾದರೆ ಮಳೆಯ ವ್ಯತ್ಯಯ ಸೂಚ್ಯಂಕವು ಶೇ.60ಕ್ಕಿಂತ ಹೆಚ್ಚಿರಬೇಕು ಎನ್ನಲಾಗಿದೆ. ನಾವು ಈ ಎರಡರ ನಡುವಿನ ಅಂತರವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಮಳೆಯ ವ್ಯತ್ಯಯ ಸೂಚ್ಯಂಕವು ಶೇ.20ರಿಂದ ಶೇ.59ರವರೆಗೆ ಇದ್ದರೂ ಅದು ಬರ ಘೋಷಣೆಗೆ ಅಗತ್ಯವಾದ ಕ್ರಿಯಾಕಾರಣ (ಟ್ರಿಗರ್) ಅಂಶವೆಂದು ಪರಿಗಣಿಸಬೇಕು ಎಂದಿದ್ದಾರೆ.
ಶುಷ್ಕ ಅಥವಾ ಒಣ ಹವೆಯ ವಿಚಾರದಲ್ಲಿಯೂ ಕೈಪಿಡಿಯಲ್ಲಿ ಕಠಿಣವಾದ ನಿಯಮಾವಳಿ ಇದೆ. ಬರ ಘೋಷಿಸಲು ಮೂರು ವಾರಗಳ ಒಣಹವೆಯನ್ನು ಸೂಚ್ಯಂಕವಾಗಿ ಪರಿಗಣಿಸಲಾಗಿದೆ. ವಿಪರ್ಯಾಸವೆಂದರೆ, ಎರಡು ಮೂರು ವಾರಗಳ ಒಣಹವೆ ಕೂಡ ಬೆಳೆಯ ಮೇಲೆ ಗಂಭೀರ ದುಷ್ಪರಿಣಾಮ ಉಂಟು ಮಾಡಿ ಸರಿಪಡಿಸಲಾಗದ ಬೆಳೆಹಾನಿಗೆ ಕಾರಣವಾಗುತ್ತದೆ. ಹಾಗಾಗಿ ಮಳೆ ಕುರಿತಾದ ಸೂಚ್ಯಂಕದಲ್ಲಿ ಒಣಹವೆಯ ಅವಧಿಯನ್ನು ಎರಡು ವಾರಗಳಿಗಿಂತ ಕಡಿಮೆ ಎಂದು ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಳೆಹಾನಿ ಸಹಾಯಧನಕ್ಕೆ ಅರ್ಹತೆ ಪಡೆಯಲು ಬರನಿರ್ವಹಣೆ ಕೈಪಿಡಿ 2016 ರಲ್ಲಿನ ನಿಯಮಗಳು ಹಾಗೂ ಎಸ್ ಡಿ ಆರ್ ಎಫ್ / ಎನ್ ಡಿ ಆರ್ ಎಫ್ ನಿಯಮಾವಳಿಗಳನ್ನು ಸಮೀಕರಿಸುವ ಅಗತ್ಯವಿದೆ. ಬರ ನಿರ್ವಹಣೆ ಕೈಪಿಡಿಯ ಮಾನದಂಡದಡಿ ಬೆಳೆಹಾನಿ ಸಹಾಯಧನಕ್ಕೆ ಅರ್ಹತೆಗೆ ಪಡೆಯಲು ಶೇ. 50 ರಷ್ಟು ಬೆಳೆಹಾನಿ ಪ್ರಮಾಣ ಅಗತ್ಯವಿರುತ್ತದೆ, ಈ ಪ್ರಮಾಣ ವಿಪತ್ತಿನ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಸ್ ಡಿ ಆರ್ ಎಫ್/ ಎನ್ ಡಿ ಆರ್ ಎಫ್ ಮಾನದಂಡಗಳ ಅಡಿ ಸೂಚಿಸಿರುವ ಶೇ.33 ಬೆಳೆ ನಾಶಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕೈಪಿಡಿಯಲ್ಲಿನ ಮಾನದಂಡವನ್ನು ಇದಕ್ಕೆ ಹೊಂದಾಣಿಕೆ ಮಾಡುವುದು ಸೂಕ್ತವಾಗಿದೆ ಎಂದಿದ್ದಾರೆ.
ಈ ಅಂಶಗಳ ಹಿನ್ನೆಲೆಯಲ್ಲಿ ಪ್ರಸಕ್ತ ಬರ ನಿರ್ವಹಣೆಯ ಕೈಪಿಡಿಯಲ್ಲಿರುವ ಮಾನದಂಡಗಳನ್ನು ಅನ್ವಯಿಸುವಾಗ, ಅದನ್ನು ಭೌಗೋಳಿಕವಾಗಿ, ಕೃಷಿ ಚಟುವಟಿಕೆ ಹಾಗೂ ಬೆಳೆಯ ವೈವಿಧ್ಯತೆಯ ಹಿನ್ನೆಲೆಯಲ್ಲಿ ಹೆಚ್ಚು ಹೊಂದಿಕೆಯಾಗುವಂತೆ, ಹೆಚ್ಚು ರೈತಸ್ನೇಹಿಯಾಗುವಂತೆ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಇರುವ ಮಾನದಂಡಗಳಿಗೆ ಸೂಕ್ತ ಮಾರ್ಪಾಡುಗಳನ್ನು ಮಾಡಬೇಕಿದ್ದು, ಅವುಗಳನ್ನು ಮರುಪರಿಶೀಲನೆಗೆ ಒಡ್ಡಲು ಇದು ಸೂಕ್ತ ಸಮಯವಾಗಿದೆ ಎಂದು ತಿಳಿಸಿದ್ದಾರೆ