ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಅನೇಕ ಸ್ಥಿತಿವಂತ ಪೋಷಕರು ತಮ್ಮ ಮಕ್ಕಳು ಬೇರೆ ಮಕ್ಕಳಿಗಿಂತ ವಿದ್ಯಾಭ್ಯಾಸದಲ್ಲಿ ಮುಂದಿರಲಿ ಎಂಬ ಉದ್ದೇಶದಿಂದ ಅವರನ್ನು ವಿಶೇಷ ಪೂರಕ ಶಿಕ್ಷಣ ಮತ್ತು ತರಬೇತಿಗಳಿಸಲು ಮತ್ತು ಅವರು ವಿವಿಧ ಪರೀಕ್ಷೆಗಳಲ್ಲಿ ಮತ್ತು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಪಡೆಯಲಿ ಎಂಬ ಆಶಯದೊಂದಿಗೆ ಹೈಸ್ಕೂಲ್ ಓದುತ್ತಿರುವಾಗಲೇ ತಮ್ಮ ಮಕ್ಕಳನ್ನು ಕೋಚಿಂಗ್ ಸೆಂಟರ್ ಗಳಲ್ಲಿ ಭರ್ತಿ ಮಾಡುತ್ತಾರೆ. ಆದರೆ ಪೂರಕ ಶಿಕ್ಷಣ ಮತ್ತು ವಿಶೇಷ ತರಬೇತಿ ನೀಡುವ ವಾಗ್ದಾನದೊಂದಿಗೆ ಹಣವನ್ನೂ ಕೂಡ ಹೇರಳವಾಗಿ ಸಂಪಾದಿಸಲು ಹೊರಟಿರುವ ಈ ಕೋಚಿಂಗ್ ಸೆಂಟರ್ ಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಬಹಳಷ್ಟು ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಅನುಭವಿಸಿ ಇತ್ತೀಚಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು ಕೂಡ ಸುದ್ದಿಯಾಗಿದೆ.
ದೇಶದಲ್ಲಿ ಈ ಕೋಚಿಂಗ್ ಸೆಂಟರ್ ಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿರುವ ಈ ಕೋಚಿಂಗ್ ಸೆಂಟರ್ ಗಳೊಂಗಿದೆ ಈಗಾಗಲೇ ಹೆಸರು ಮಾಡಿರುವ ಪ್ರಖ್ಯಾತ ಕೋಚಿಂಗ್ ಸೆಂಟರ್ ಗಳು ಕೂಡ ತಮ್ಮ ಕಬಂಧ ಬಾಹುಗಳನ್ನು ದೇಶದಾದ್ಯಂತ ಚಾಚಿ ಎಲ್ಲಾ ವಯಸ್ಸಿನ ಮಕ್ಕಳನ್ನು ಬಾಚಿಕೊಂಡು ಅವರಿಗೆ ಕೋಚಿಂಗ್ ನೀಡುವ ಮತ್ತು ಅವರು ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡುವ ಭ್ರಮೆಯನ್ನು ಹುಟ್ಟಿಸುತ್ತಿರುವುದನ್ನು ನೋಡಿ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿರುವ ಸರ್ಕಾರ ಈಗ ಕೋಚಿಂಗ್ ಸೆಂಟರ್ ಗಳ ನಿಯಂತ್ರಣಕ್ಕೆ ಹೊಸದೊಂದು ಮಾರ್ಗಸೂಚಿ (Guidelines for Regulation of Coaching Centres 2024) ಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಒಂದು ಕಾನೂನಿನ ಕಟ್ಟುಪಾಡಾಗಿದ್ದು ಇದನ್ನು ಅನುಷ್ಠಾನ ಗೊಳಿಸುವುದರ ಬಗ್ಗೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಈ ಮಾರ್ಗಸೂಚಿಯ ಪೈಕಿ ಪ್ರಮುಖವಾಗಿ ಕೋಚಿಂಗ್ ಸೆಂಟರ್ ಗಳು ಹದಿನಾರು ವಯಸ್ಸಿಗೆ ಕಡಿಮೆ ಇರುವ ಮಕ್ಕಳನ್ನು ಯಾವುದೇ ಕೋರ್ಸ್ ಗಳಿಗೆ ದಾಖಲಿಸಿಕೊಳ್ಳುವಂತಿಲ್ಲ ಮತ್ತು ಒಂದು ದಿನಕ್ಕೆ ೫ ಗಂಟೆಗಳಿಗಿಂತ ಹೆಚ್ಚು ಅವಧಿಗೆ ಕ್ಲಾಸ್ ಗಳನ್ನೂ ನಡೆಸುವಂತಿಲ್ಲ. ಮಕ್ಕಳ ಪೋಷಕರಿಗೆ ಮನಬಂದಂತೆ ಭರವಸೆಗಳನ್ನು ನೀಡಿ ಅವರನ್ನು ದಾರಿ ತಪ್ಪಿಸುವಂತಿಲ್ಲ. ಮಕ್ಕಳಿಗೆ ಹಬ್ಬ ಹರಿದಿನಗಳಲ್ಲಿ ಭಾಗವಹಿಸಲು ಅನುವಾಗುವಂತೆ ಕ್ಲಾಸ್ ಗಳನ್ನೂ ಏರ್ಪಡಿಸಬೇಕು ಮತ್ತು ಮುಖ್ಯವಾಗಿ ಎಲ್ಲಾ ಕೋಚಿಂಗ್ ಸೆಂಟರ್ ಗಳಲ್ಲಿ ನಮೂದಿಸಲ್ಪಟ್ಟ ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಲು ಮತ್ತು ಮಕ್ಕಳಲ್ಲಿ ಖಿನ್ನತೆ ಮತ್ತಿತರ ಸಮಸ್ಯೆಗಳನ್ನು ಗುರುತಿಸಲು ಮತ್ತು ಅದಕ್ಕೆ ಪರಿಹಾರ ಸೂಚಿಸಲು ಬೇಕಾದ ಆಪ್ತ ಸಮಾಲೋಚನಾ ವ್ಯವಸ್ಥೆಯನ್ನು ಏರ್ಪಡಿಸಬೇಕು. ಇದೆಲ್ಲ ಇದ್ದರೆ ಮಾತ್ರ ಅಂಥ ಕೋಚಿಂಗ್ ಸೆಂಟರ್ ಗಳಿಗೆ ಅನುಮತಿ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಧೃಡಪಡಿಸಲಾಗಿದೆ. ಕೇಂದ್ರದ ಈ ಮಾರ್ಗಸೂಚಿಯನ್ನು ಅನೇಕ ಮಂದಿ ಪೋಷಕರು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ.