ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ರಾಜಧಾನಿ ಬೆಂಗಳೂರಿನ ಸೆರಗಿಗೆ ಅಂಟಿಕೊಂಡಿರುವ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಿದೆ. ಬೆಂಗಳೂರಿಗೆ ಸಮೀಪದಲ್ಲಿರುವ ಈ ಕ್ಷೇತ್ರ ದ್ರಾಕ್ಷಿ, ರೇಷ್ಮೆ ಹಾಗೂ ಧಾನ್ಯಗಳ ಬೆಳೆಗಳಿಗೆ ಜನಪ್ರಿಯವಾಗಿದೆ. ಉತ್ತಮ ರೈಲ್ವೆ ಬಸ್ ಸಂಪರ್ಕ,ಅನತಿ ದೂರದಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದಾಗಿ ಉತ್ತಮ ಸಂಪರ್ಕ ಹೊಂದಿರುವ ಪ್ರದೇಶವಾಗಿದೆ.
ಅವಿಭಜಿತ ಕೋಲಾರ ಜಿಲ್ಲೆಯ ಒಂದು ತಾಲ್ಲೂಕಾಗಿದ್ದ ಚಿಕ್ಕಬಳ್ಳಾಪುರ ಇವತ್ತಿಗೂ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಕೋಲಾರ ಜಿಲ್ಲೆಗೆ ಹತ್ತಿರದಲ್ಲಿಯೇ ಇದೆ. ಆದರೆ, 2007ರಲ್ಲಿ ಪ್ರತ್ಯೇಕ ಜಿಲ್ಲೆಯಾದ ನಂತರ ಕೋಲಾರದ ರಾಜಕಾರಣಕ್ಕಿಂತ ಇಲ್ಲಿನ ರಾಜಕಾರಣ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿದ್ದು ದೇಶದ ಗಮನ ಸೆಳೆದಿದೆ.
ಲೋಕಸಭಾ ಕ್ಷೇತ್ರವು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿದೆ.
1951ರಿಂದ ಸಾಮಾನ್ಯ ಕ್ಷೇತ್ರವಾಗಿದ್ದ ಇದು, 1978ರಿಂದ ಮೂವತ್ತು ವರ್ಷಗಳವರೆಗೆ ಪರಿಶಿಷ್ಟರ ಮೀಸಲು ಕ್ಷೇತ್ರವಾಗಿತ್ತು. ನಂತರದಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು 2008ರ ಕ್ಷೇತ್ರ ಪುನರ್ ವಿಂಗಡನೆಗೂ ಮುನ್ನ ಈ ಕ್ಷೇತ್ರ ನೆರೆಯ ತುಮಕೂರಿಗೂ ಹಂಚಿಕೊಂಡಿತ್ತು. ಅಂದು ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು ಗ್ರಾಮಾಂತರದ ನೆಲಮಂಗಲ, ದೊಡ್ಡಬಳ್ಳಾಪುರ, ತುಮಕೂರಿನ ಕೊರಟಗೆರೆ ಮಧುಗಿರಿ ವಿಧಾನಸಭೆ ಕ್ಷೇತ್ರಗಳು ಸೇರಿದ್ದವು.
2008ರ ಕ್ಷೇತ್ರ ಪುನರ್ ವಿಂಗಡಣೆ ನಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 19,50,443 ಜನರು ಮತದಾನದ ಹಕ್ಕು ಹೊಂದಿದ್ದಾರೆ. ಇವರಲ್ಲಿ 9,69,538 ಪುರುಷ ಮತದಾರರಾದರೆ, 9,80,641 ಮಹಿಳಾ ಮತದಾರರಾಗಿದ್ದಾರೆ. 232 ಇತರೆ ಮತದಾರರೂ ಕ್ಷೇತ್ರದಲ್ಲಿದ್ದಾರೆ. ಯಲಹಂಕ ಕ್ಷೇತ್ರದಲ್ಲಿ ಗರಿಷ್ಠ 4,45,861 ಮತದಾರರು ಇದ್ದು, Electionಯಲ್ಲಿ ಹೆಚ್ಚಿನ ಪ್ರಭಾವ ಬೀರಲಿದ್ದಾರೆ.
ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಗೌರಿಬಿದನೂರಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿರುವ ಪುಟ್ಟಸ್ವಾಮಿಗೌಡ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ.ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಶಾಸಕರು ಇದ್ದಾರೆ.
ಈ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ರಾಜ್ಯದಲ್ಲಿ ಆಡಳಿತ ರೂಢ ಕಾಂಗ್ರೆಸ್ ಮತ್ತು ಪ್ರಮುಖ ಪಕ್ಷ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಹಲವಾರು ಸುತ್ತಿನ ಮಾತುಕತೆ ರಾಜಿ ಸಂಧಾನಗಳ ಬಳಿಕ ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡಿದೆ. ಇದು ತಮ್ಮ ಕೊನೆಯ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ಕೊಡಿ ಎಂದು ಕೊನೆಯ ಕ್ಷಣದವರೆಗೂ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೈಕಮಾಂಡ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ ಆದರೆ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡುತಿದ್ದಾರೆ. ಮಾಜಿ ಶಾಸಕ ಶಿವಶಂಕರ ರೆಡ್ಡಿ ಕೂಡ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದರು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂದಾನಕ್ಕೆ ಮಣಿದು ಕಾಂಗ್ರೆಸ್ ಅಭ್ಯರ್ಥಿ ಪರ ನಿಂತಿದ್ದಾರೆ.
ಬಿಜೆಪಿಯಲ್ಲೂ ಇದೇ ರೀತಿಯ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಬಂಡಾಯದ ಬಾವುಟ ಹಾರಿಸಲು ಸಜ್ಜಾದರಾದರೂ ವರಿಷ್ಠರ ಮಧ್ಯಪ್ರವೇಶದ ಬಳಿಕ ತಮ್ಮ ನಿಲುವು ಬದಲಾಯಿಸಿದರು. ದೊಡ್ಡಬಳ್ಳಾಪುರ ಶಾಸಕ ಮುನಿರಾಜು ಗೌಡ ಬಾಗೇಪಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರು ಈ ಕ್ಷೇತ್ರದಿಂದ ಮಾಜಿ ಸಚಿವ ಸುಧಾಕರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಆದರೆ ಅವರು ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಬಳಸಿ ಟಿಕೆಟ್ ಪಡೆದ ನಂತರ ವರಿಷ್ಠರ ಸೂಚನೆ ಮೇರೆಗೆ ಎಲ್ಲರೂ ಇದೀಗ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಅಂಕಿ-ಅಂಶಗಳನ್ನು ನೋಡಿದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. 1996ರಲ್ಲಿ ಆರ್‌ಎಲ್ ಜಾಲಪ್ಪ ಒಂದು ಬಾರಿ ಜನತಾದಳದಿಂದ ಗೆದ್ದಿದ್ದು ಬಿಟ್ಟರೆ 2014ರವರೆಗೂ ಇದು ಕಾಂಗ್ರೆಸ್‌ನ ಭದ್ರಕೋಟೆ. ಆರ್‌ಎಲ್ ಜಾಲಪ್ಪ ನಂತರ ಕಾಂಗ್ರೆಸ್ ಸೇರಿ 1998, 1999 ಹಾಗೂ 2004ರಲ್ಲಿ ಗೆಲುವು ಸಾಧಿಸಿದ್ದರು.
ವಯೋ ಸಹಜ ಕಾರಣಗಳಿಂದಾಗಿ ಜಾಲಪ್ಪ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿಯಾದರೂ
ಮುಂದೆ ಇಲ್ಲಿಗೆ ವಲಸೆ ಬಂದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ. ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮೊಯ್ಲಿ ಅವರು ಕೇಂದ್ರ ಮಂತ್ರಿಯೂ ಆಗಿ ಹೆಸರು ಮಾಡಿದರು ಆದರೆ ನಂತರದ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯವಾಗಿ ಮೂಲೆಗುಂಪಾಗಿದ್ದಾರೆ.
ಹಾಲಿ ಸಂಸದ ಬಚ್ಚೇಗೌಡ ಅವರು ಸಹಜ ಕಾರಣಗಳಿಂದಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗಿದ್ದಾರೆ
ಇದೀಗ ಯುವ ಕಾಂಗ್ರೆಸ್ ಮುಖಂಡ ರಕ್ಷಾ ರಾಮಯ್ಯ ಸಚಿವ ಸುಧಾಕರ್ ನಡುವೆ ನೇರ ಪೈಪೋಟಿ ನಡೆದಿದೆ ರಕ್ಷಾ ರಾಮಯ್ಯ ಅವರ ಪರವಾಗಿ ಅವರ ತಂದೆ ಮಾಜಿ ಸಚಿವ ಎಂಆರ್ ಸೀತಾರಾಮ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವಂತೆ ಕ್ಷೇತ್ರಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ ಕೈವಾರ ಕ್ಷೇತ್ರದಲ್ಲಿ ತಮ್ಮ ಕುಟುಂಬ ಮಾಡಿರುವ ಧಾರ್ಮಿಕ ಸೇವೆ ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ತಮ್ಮ ತಂದೆಯ ಹೆಸರನ್ನು ಹೇಳಿಕೊಂಡು ಮಗನ ಪರವಾಗಿ ಮತಯಾಚಿಸುತ್ತಿದ್ದಾರೆ.
ಮತ್ತೊಂದಡೆಯಲ್ಲಿ ಸುಧಾಕರ್ ಅವರು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರೊಂದಿಗೆ ಕ್ಷೇತ್ರದಲ್ಲೇ ಪ್ರವಾಸ ಮಾಡುತ್ತಿದ್ದು ಮಂತ್ರಿಯಾಗಿ ತಾವು ಮಾಡಿದ ಸಾಧನೆಗಳು ಕೇಂದ್ರ ಸರ್ಕಾರದ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿಕೊಂಡು ಮತ ಕೇಳುತ್ತಿದ್ದಾರೆ.
ಬಯಲು ಸೀಮೆಯ ಈ ಕ್ಷೇತ್ರದಲ್ಲಿ ಪ್ರತಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯ ಸಮಯದಲ್ಲಿ ನೀರಾವರಿ ವಿಚಾರವು ಚುನಾವಣೆಯ ಪ್ರಮುಖ ವಿಷಯವಾಗುತ್ತದೆ.ಬಯಲು ಸೀಮೆಗೆ ಶಾಶ್ವತ ನೀರಾವರಿ ಕಲ್ಪಿಸುತ್ತೇವೆ ಎನ್ನುವ ಮಾತುಗಳು ಈ ಬಾರಿಯ ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ಮತ್ತೊಮ್ಮೆ ಜೋರಾಗಿ ಕೇಳುತ್ತಿವೆ. ರಾಜಕಾರಣಿಗಳ ಮಾತಿನಲ್ಲಿ ನೀರಿನ ಹೊಳೆ ಹರಿಯುತ್ತಿದೆ.
2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಯ ರೂವಾರಿ ಎನಿಸಿದ್ದ ಎಂ.ವೀರಪ್ಪ ಮೊಯಿಲಿ ಇದೀಗ ಕೇವಲ ನೆಪ ಮಾತ್ರಕ್ಕೆ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೆಂಪರಾಜು ಈಗ ಒಂದೇ ತೆಕ್ಕೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರ ನಡೆಸುತ್ತಿದ್ದಾರೆ. .
ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬಾಗೇಪಲ್ಲಿ ಮುಖಂಡ ಮುನಿರಾಜು, ಎಸ್.ಆರ್.ವಿಶ್ವನಾಥ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಸುಧಾಕರ್ ಅವರಿಗೆ ಟಿಕೆಟ್ ದೊರೆತ ನಂತರ ಒಗ್ಗೂಡಿದ್ದಾರೆ.
ಬಾಗೇಪಲ್ಲಿ ಕ್ಷೇತ್ರದ ಬಹುತೇಕ ಒಕ್ಕಲಿಗ ಮುಖಂಡರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈಗ ಶಾಸಕ ಪ್ರದೀಪ್ ಈಶ್ವರ್ ಮಾಡಿದ ಪ್ರಸ್ತಾಪ ಗಳಿಂದಾಗಿ ಒಕ್ಕಲಿಗ ಸಮುದಾಯ ಬೇರೆ ನಿರ್ಧಾರಕ್ಕೆ ಬಂದಿದೆ ಹೀಗಾಗಿ ಜಾತಿ ಪ್ರಜ್ಞೆ ಜೋರಾದಷ್ಟು ಈ ಕ್ಷೇತ್ರದಲ್ಲಿ ಮತದಾರರು ಅದಲು ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈ ಚುನಾವಣೆಯಲ್ಲಿ ನೀರಾವರಿ ರೇಷ್ಮೆ ತರಕಾರಿ ಬೆಳೆ ಇತ್ಯಾದಿ ವಿಷಯಗಳು ಕೇವಲ ನೆಪ ಮಾತ್ರಕ್ಕೆ ಚರ್ಚೆಗೆ ಬರುತ್ತಿದೆ ಬಿಜೆಪಿ ಜಾತಿ ಲೆಕ್ಕಾಚಾರದಲ್ಲಿ ಮತ ಕ್ರೂಡೀಕರಣಕ್ಕೆ ಮುಂದಾದರೆ ಕಾಂಗ್ರೆಸ್ ಕೋವಿಡ್ ಸಮಯದಲ್ಲಿ ನಡೆದ ಭ್ರಷ್ಟಾಚಾರ ಹಾಗೂ ತಾನು ನೀಡಿರುವ ಗ್ಯಾರಂಟಿಗಳ ಹೆಸರಿನಲ್ಲಿ ಮತಗಳನ್ನು ಕೇಳುತ್ತಿದೆ.
ಬದಲಾದ ಲೆಕ್ಕಾಚಾರದಲ್ಲಿ ಒಕ್ಕಲಿಗ ಸಮುದಾಯ ಬಹುತೇಕ ಬಿಜೆಪಿ ಪರ ನಿಲ್ಲುವ ಸಾಧ್ಯತೆ ದಟ್ಟವಾಗಿ ಕಾಣಿಸುತ್ತಿದ್ದು ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ ಪರ ಮೆಂತಿದೆ ಇವರಲ್ಲಿ ಯಾರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ಮತ ಹಾಕುತ್ತಾರೆ ಎನ್ನುವುದು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತದೆ.