ಬೆಂಗಳೂರು, ಫೆ.7- ಕೌಟುಂಬಿಕ ಕಾರಣ, ಶೈಕ್ಷಣಿಕ ಒತ್ತಡ, ಬದಲಾದ ಜೀವನ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಬೆಂಗಳೂರು ನಗರದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕುರಿತಾಗಿ ಹೊರಬಿದ್ದಿರುವ ಅಂಕಿ ಅಂಶಗಳು ಆತಂಕ ಮೂಡಿಸುತ್ತವೆ.
ಅದರಲ್ಲೂ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಬಿಟ್ಟು ಓಡಿ ಹೋಗುತ್ತಿರುವುದು ಆತಂಕಕಾರಿ ವಿದ್ಯಮಾನವಾಗಿದೆ.
ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ಕುರಿತಂತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಟಿವಿ ನೋಡಲು ರಿಮೋಟ್ ಕೊಡಲಿಲ್ಲ,ಮೊಬೈಲ್ ಕೊಡಿಸಿಲ್ಲ, ಶಾಲೆಯಲ್ಲಿ ಒಳ್ಳೆಯ ಅಂಕ ಬಂದಿಲ್ಲ, ತಂದೆ-ತಾಯಿ ಜಗಳ, ಕೌಟುಂಬಿಕ ಕಿರಿಕಿರಿಯಿಂದ ಬೇಸತ್ತು ಮಕ್ಕಳು ಮನೆ ಬಿಟ್ಟು ಹೋಗುವಂತಹ ನಿರ್ಧಾರಗಳನ್ನು ಮಾಡುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಒಂದು ವರ್ಷದಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ 34% ರಷ್ಟು ಏರಿಕೆಯಾಗಿದೆ. 2020ರಲ್ಲಿ 421 ಗಂಡು ಮಕ್ಕಳು ನಾಪತ್ತೆಯಾಗಿದ್ದರೆ 1136 ಹೆಣ್ಣು ಮಕ್ಕಳು ಮನೆ ಬಿಟ್ಟು ಹೋಗಿದ್ದರು. ಈಮಕ್ಕಳ ಪೈಕಿ 21 ಗಂಡು, 37 ಹೆಣ್ಣು ಮಕ್ಕಳನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ.
2021ರಲ್ಲಿ 488 ಗಂಡು, 1630 ಹೆಣ್ಣುಮಕ್ಕಳು ನಾಪತ್ತೆಯಾಗಿದ್ದರು.ಈ ಪೈಕಿ 28 ಗಂಡು, 64 ಹೆಣ್ಣು ಮಕ್ಕಳು ಪತ್ತೆ ಇನ್ನೂ ಆಗಿಲ್ಲ ಎಂದು ಚೈಲ್ಡ್ ರೈಟ್ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
2022 – 23 ರ ಸಾಲಿನಲ್ಲಿ ನಾಪತ್ತೆಯಾಗಿರುವ 5,144 ಮಕ್ಕಳ ಪೈಕಿ 934 ಮಕ್ಕಳನ್ನ ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.ಈ ಮೂಲಕ 347 ಗಂಡು ಹಾಗೂ 853 ಹೆಣ್ಣು ಮಕ್ಕಳು ಸೇರಿ ಒಟ್ಟು 1200 ನಾಪತ್ತೆ ಪ್ರಕರಣಗಳಲ್ಲಿ ಮಕ್ಕಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.
ಮಕ್ಕಳ ನಾಪತ್ತೆಗೆ ಕೌಟುಂಬಿಕ ಒತ್ತಡವೇ ಕಾರಣ ಎಂದು ಚೈಲ್ಡ್ ರೈಟ್ ಸಂಸ್ಥೆ ತಿಳಿಸಿದೆ.
ಕೌಟುಂಬಿಕ ಕಾರಣಗಳು ಶೈಕ್ಷಣಿಕ ಒತ್ತಡ ತಾಳಲಾರದೇ ಮನೆ ಬಿಟ್ಟು ಹೋಗಲು ಮಕ್ಕಳು ನಿರ್ಧರಿಸುತ್ತಿದ್ದಾರೆ. ಕೋವಿಡ್ ನಂತರ ಶೈಕ್ಷಣಿಕವಾಗಿ ಬರುವ ಒತ್ತಡಕ್ಕೆ ಹೆದರಿ ಹೋಗಿರುವ ಮಕ್ಕಳು, ಮನೆಯಲ್ಲೂ ಅತ್ಯುತ್ತಮ ಅಂಕಗಳನ್ನು ಪಡೆಯುವಂತೆ ಒತ್ತಡ ಕೇಳಿ ಬರಲಿದ್ದು,ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆಯುವುದನ್ನು ಪೋಷಕರು ಕಡಿಮೆ ಮಾಡಿದ್ದಾರೆ. ಮನಸ್ಸಿನ ದುಗುಡ ಹೇಳಿಕೊಳ್ಳಲಾರದೆ ಮಕ್ಕಳಿಗೆ ಒತ್ತಡ ಹೆಚ್ಚಳವಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ ಎಂದು ಅಧ್ಯಯನ ವರದಿ ಹೇಳುತ್ತದೆ.
ಒಟ್ಟಿನಲ್ಲಿ ಮಕ್ಕಳು ಕಾಣೆಯಾಗುವ ಪ್ರಕರಣ ಏರಿಕೆಯಾಗುತ್ತಿದ್ದು, ಒಂದು ಸರಿ ಮನೆ ಬಿಟ್ಟು ಹೋಗುವ ಮಕ್ಕಳಿಗೆ ಅಭ್ಯಾಸವಾದರೆ, ಅದನ್ನೇ ಪದೇ ಪದೇ ಮಾಡಲಿದ್ದು, ಈ ಅಭ್ಯಾಸ ತಪ್ಪಿಸುವ ಕಡೆ ಪೊಷಕರು ಗಮನ ಹರಿಸಬೇಕಿದೆ.