ಬೆಂಗಳೂರು,
ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಸಿಐಡಿ ಪೊಲೀಸರು ಕೇಳಿದ ಯಾವುದೇ ಪ್ರಶ್ನೆಗೂ ಸರಿಯಾದ ಉತ್ತರ ನೀಡದೆ ನಾನು ಅಮಾಯಕ ನನಗೇನು ಗೊತ್ತಿಲ್ಲ ಅನಗತ್ಯವಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ರಾಜಕೀಯ ದ್ವೇಷದಿಂದ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸಿಐಡಿ ಪೊಲೀಸರ ಮುಂದೆ ಹೇಳುತ್ತಿದ್ದಾರೆ.
ಆದರೆ ಇದನ್ನು ಒಪ್ಪದ ಸಿಐಡಿ ಪೊಲೀಸರು ರೌಡಿ ಬಿಕ್ಲು ಶಿವನನ್ನು ಹತ್ಯೆ ಮಾಡಿದ ಹಂತಕರು ಮರುಕ್ಷಣವೇ ಬೈರತಿ ಬಸವರಾಜು ಅವರಿಗೆ ಮೊಬೈಲ್ ಕರೆ ಮಾಡಿದ್ದು ಅದರ ವಿವರಗಳನ್ನು ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು ಆ ಕರೆಯ ಸುತ್ತಲೂ ಹಲವಾರು ಪ್ರಶ್ನೆಗಳನ್ನು ಹಾಕುತ್ತಿದ್ದಂತೆ ಬೈರತಿ ಬಸವರಾಜು ಕೊಂಚ ಮೆತ್ತಗಾಗಿದ್ದಾರೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ
ಪ್ರಕರಣದ ಸಂಬಂಧ ನಗರದ 42ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರ ಆದೇಶ ಮೇರೆಗೆ 7 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ನೇತೃತ್ವದ ಅಧಿಕಾರಿಗಳ ತಂಡ ಬಸವರಾಜ್ ಅವರನ್ನು ವಿಚಾರಣೆ ನಡೆಸಿ ರೌಡಿ ಬಿಕ್ಲು ಶಿವ ಕೊಲೆ ಸಂಬಂಧ ಮಾಹಿತಿಯನ್ನು ಕಲೆ ಹಾಕತೊಡಗಿದೆ.
ಕಳೆದ ಜುಲೈ 15ರಂದು ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ 8-9 ಜನ ದುಷ್ಕರ್ಮಿಗಳು ಶಿವಪ್ರಕಾಶ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಮೃತ ಶಿವಪ್ರಕಾಶ್ ಅವರ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್, ಇತರರ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಬೈರತಿ ಬಸವರಾಜು ಐದನೇ ಆರೋಪಿಯಾಗಿದ್ದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು ಇವರ ಅರ್ಜಿ ಕೋರ್ಟಿನಲ್ಲಿ ವಜಾಗೊಳ್ಳುತ್ತಿದ್ದಂತೆ ನಾಪತ್ತೆಯಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು ಅಲ್ಲಿಯೂ ಇವರ ಅರ್ಜಿ ತಿರಸ್ಕೃತಗೊಂಡ ಬಳಿಕ, ಬೈರತಿ ಬಸವರಾಜ್ ಅವರು ಫೆಬ್ರವರಿ 12ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದರು ಇವರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆಯಲಾಗಿತ್ತು.

