ಬೆಂಗಳೂರು- ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಹಗರಣಗಳಲ್ಲೇ ಅತ್ಯಂತ ದೊಡ್ಡ ಕರ್ಮಕಾಂಡ ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಕೆಲ ರಾಜಕಾರಣಿಗಳು ಜೈಲು ಪಾಲಾದ ಈ ಪ್ರಕರಣದಲ್ಲಿ ಇನ್ನೂ ಹಲವು ಕಾಣದ ಕೈಗಳ ಕೈವಾಡವಿದ್ದು ಅವುಗಳನ್ನು ಹೊರಗೆಳೆಯಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಉದ್ಯೋಗಾಕಾಂಕ್ಷಿಗಳ ಕನಸಿಗೆ ತಣ್ಣೀರೆರಚಿ ಹಣಕ್ಕಾಗಿ ಹುದ್ದೆಗಳನ್ನು ಮಾರಾಟ ಮಾಡಿದ ಈ ಪ್ರಕರಣದ ನಿಜವಾದ ಸೂತ್ರಧಾರಿಯನ್ನು ಬಯಲಿಗೆಳೆಯಲು ಸಿಐಡಿ ತಂಡ ಕೆಲಸ ಮಾಡುತ್ತಿರುವ ಬೆನ್ನಲ್ಲೇ ಇದೀಗ ತನಿಖಾ ತಂಡದ ವಿರುದ್ಧವೇ ಲಂಚದ ಆರೋಪ ಕೇಳಿಬಂದಿದೆ.
ಅದರಲ್ಲೂ ಹಗರಣದ ಕಿಂಗ್ ಪಿನ್ ಎಂದೇ ಬಣ್ಣಿಸಲ್ಪಡುತ್ತಿರುವ ಆರ್.ಡಿ.ಪಾಟೀಲ್ ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಪರಾರಿಯಾಗಿ ಇದೀಗ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಈ ಶರಣಾಗತಿ ಪ್ರಕ್ರಿಯೆಗೂ ಮುನ್ನ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮ್ಮ ಅನುಭವವನ್ನು ವಿವರವಾಗಿ ಹೇಳಿಕೊಂಡಿದ್ದಾರೆ.
‘ತಮ್ಮ ವಿರುದ್ಧದ ಅಕ್ರಮ ನೇಮಕಾತಿ ಪ್ರಕರಣ ಮುಚ್ಚಿ ಹಾಕಲು ಸಿಐಡಿ ತನಿಖಾಧಿಕಾರಿ ಶಂಕರ್ ಪಾಟೀಲ್ ಹಣದ ಬೇಡಿಕೆಯಿಟ್ಟಿದ್ದಾರೆ. ಮೂರು ಕೋಟಿ ಹಣದ ಬೇಡಿಕೆ ಇಟ್ಟಿದ್ದರು. ಈಗಾಗಲೇ 76 ಲಕ್ಷ ಕೊಟ್ಟಿದ್ದೇನೆ’ ಎಂದು ಆರ್‌ಡಿ ಪಾಟೀಲ್ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ.
ತನಿಖಾಧಿಕಾರಿ ಹಣಕ್ಕೆ ಬೇಡಿಕೆ ಇಟ್ಟಿರುವ ಹಾಗೂ ತಾವು ಇದರಲ್ಲಿ ಸ್ವಲ್ಪ ಪ್ರಮಾಣದ ಹಣ ನೀಡಿರುವ ಬಗ್ಗೆ ಸಾಕ್ಷಿ ಸಮೇತ ಲೋಕಾಯುಕ್ತ, ಸಿಐಡಿ ವಿಭಾಗದ ಎಡಿಜಿಪಿ, ಎಡಿಜಿಪಿ ಅಲೋಕ್ ಕುಮಾರ್ ಮತ್ತು ಗೃಹ ಸಚಿವರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ವಿಡಿಯೋ ಕಳಿಸಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
‘ತನಿಖಾಧಿಕಾರಿ ಕೇವಲ ನನ್ನಿಂದ ಮಾತ್ರವಲ್ಲ ಪ್ರಕರಣದ ಎಲ್ಲಾ ಆರೋಪಿಗಳಿಂದ ಹಣ ಪಡೆದಿದ್ದಾರೆ’ ಎಂದಿದ್ದಾರೆ.
‘ಇನ್ನು ತನ್ನನ್ನು ವಿಚಾರಣೆಗೊಳಪಡಿಸಲು ಮನೆಗೆ ಬಂದ ಸಿಐಡಿ ಅಧಿಕಾರಿಗಳನ್ನು ತಳ್ಳಿ ಪರಾರಿಯಾಗಿದ್ದೇನೆ ಎಂದು ಆರೋಪಿಸಲಾಗಿದೆ. ಹಾಗಾದರೆ ತನಿಖೆಗೆ ಒಬ್ಬರೇ ಅಧಿಕಾರಿ ಬಂದಿದ್ದರೇ? ಅಧಿಕಾರಿಗಳನ್ನು ತಳ್ಳಿ ಪರಾರಿಯಾಗುವುದು ಹೇಗೆ ಸಾಧ್ಯ?’ ಎಂದಿದ್ದಾರೆ.
ತನಿಖಾಧಿಕಾರಿ ಶಂಕರ್ ಪಾಟೀಲ್ ತಂಡವು ‘ತಮ್ಮ ಬಳಿ ನಿಮ್ಮ ವಿರುದ್ಧ ಪಿಎಸ್‌ಐ ಪ್ರಕರಣ ಮಾತ್ರವಲ್ಲ ಬೇರೆ ಬೇರೆ ಪ್ರಕರಣಗಳಿವೆ ಎಂದಿದ್ದಾರೆ. ಸುಮ್ಮನೆ ಯಾಕೆ ತಿರುಗಾಡುವಿರಿ ನಮ್ಮೊಂದಿಗೆ ರಾಜಿಯಾಗಿ’ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ‘ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಮಲ್ಲಿಕಾರ್ಜುನ ಅವರಿಂದ ನನ್ನ ಅಳಿಯ ಹಣ ತಂದುಕೊಟ್ಟಿದ್ದಾನೆ. ನನ್ನ ಅಳಿಯ ಶ್ರೀಕಾಂತ್ ಮೂಲಕ ಸಿಐಡಿ ಡಿವೈಎಸ್ಪಿ ಶಂಕರ ಗೌಡ ಅವರಿಗೆ 76 ಲಕ್ಷ ಹಣ ತಂದುಕೊಡಲಾಗಿದೆ’ ಎಂದು ಆರ್.ಡಿ ಪಾಟೀಲ್ ಗಂಭೀರವಾಗಿ ವಿಡಿಯೋದಲ್ಲಿ ಹೇಳಿದ್ದಾರೆ.
Previous Articleವಿಮಾನದಲ್ಲಿ ಪ್ರಯಾಣಿಕರು ಯಾಕೆ ಹೀಗೆ?
Next Article ಆಮ್ ಆದ್ಮಿಗೆ ನೂತನ ಸಾರಥಿಗಳು..